ಮುಂಬೈ (ಮಹಾರಾಷ್ಟ್ರ) : I.N.D.I.A ಕೂಟದ ಸದಸ್ಯ ಪಕ್ಷವಾಗಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಮಂಗಳವಾರ ಘೋಷಿಸಿದೆ.
ದೆಹಲಿ ವಿಧಾನಸಭೆ ಚುಣಾವಣೆಯಲ್ಲಿ ಆಪ್ ಅಥವಾ ಕಾಂಗ್ರೆಸ್ನ ಯಾವ ಪಕ್ಷದ ಪರ ಪ್ರಚಾರ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಿವಸೇನೆ ಸಂಸದ ಸಂಜಯ್ ರಾವುತ್, "ಎರಡೂ ಪಕ್ಷಗಳು ನಮ್ಮ ಮಿತ್ರರೇ. ಚುನಾವಣೆಯಲ್ಲಿ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡದೆ, ತಟಸ್ಥ ನಿಲುವು ಅನುಸರಿಸಲಾವುದು" ಎಂದರು.
"ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ನಮ್ಮ ಪಕ್ಷದ ಯಾವುದೇ ನಾಯಕರು ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗುತ್ತಿಲ್ಲ. ಈ ವಿಚಾರದಲ್ಲಿ ಪಕ್ಷವು ತಟಸ್ಥವಾಗಿರಲು ಬಯಸಿದ್ದೇವೆ " ಎಂದು ಮಾಹಿತಿ ನೀಡಿದರು.
ಆಪ್ಗೆ ಟಿಎಂಸಿ, ಎಸ್ಪಿ ಬೆಂಬಲ: ಫೆಬ್ರವರಿ 5 ರಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಆಪ್) ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಈಗಾಗಲೇ ಬೆಂಬಲ ಘೋಷಿಸಿದೆ. ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಆಪ್ನ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಾಗಿ ತಿಳಿಸಿವೆ.
ಕಾಂಗ್ರೆಸ್ಗಿಲ್ಲ ಇಂಡಿಯಾ ಬೆಂ‘ಬಲ'?: ಇನ್ನೂ, ಚುನಾವಣೆಯಲ್ಲಿ ಮಿತ್ರಪಕ್ಷ ಆಪ್ ಜೊತೆ ಮೈತ್ರಿ ಕೂಡ ಮಾಡಿಕೊಳ್ಳದ ಕಾಂಗ್ರೆಸ್ ಪ್ರತ್ಯೇಕವಾಗಿ ಪ್ರಬಲ ಸ್ಪರ್ಧೆ ನೀಡುತ್ತಿದೆ. ವಿಪಕ್ಷಗಳ ಇಂಡಿಯಾ ಕೂಟದ ಯಾವುದೇ ಸಹಪಕ್ಷಗಳು ಕೂಡ ಬೆಂಬಲ ನೀಡಿಲ್ಲ. ಆಪ್ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡುತ್ತಿರುವ ಕೈ ನಾಯಕರು, ಚುನಾವಣೆಯಲ್ಲಿ ಕೇಜ್ರಿವಾಲ್ ಸೇರಿದಂತೆ ಆ ಪಕ್ಷದ ನಾಯಕರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇದರಿಂದ ದೆಹಲಿ ಚುನಾವಣಾ ಕಣದಲ್ಲಿ ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟ ನಡೆಯುವ ನಿರೀಕ್ಷೆಯಿದೆ.
ಇತ್ತ, ಬಿಜೆಪಿಗೆ ಎನ್ಡಿಎ ಮಿತ್ರಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವು ಬೆಂಬಲ ನೀಡುವುದಾಗಿ ಘೋಷಿಸಿದೆ.