ಬದೌನ್ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಶನಿವಾರ ಮಹಿಳಾ ನ್ಯಾಯಾಧೀಶರೊಬ್ಬರು ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
27 ವರ್ಷದ ಜ್ಯೋತ್ಸ್ನಾ ರಾಯ್ ಎಂಬುವವರೇ ಮೃತ ನ್ಯಾಯಾಧೀಶೆ. ಇವರು ಬುಡೌನ್ ನ್ಯಾಯಾಲಯದಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು. ಇಲ್ಲಿನ ಜಡ್ಜ್ ಕಾಲೋನಿ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ತಮ್ಮ ಬೆಡ್ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬುದೌನ್‌ನ ಹಿರಿಯ ಪೊಲೀಸ್ ಅಧೀಕ್ಷಕ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ.
ಡೆತ್ನೋಟ್ ಪತ್ತೆ: ಶನಿವಾರ ಬೆಳಗ್ಗೆ 10 ಗಂಟೆಯಾದರೂ ಜ್ಯೋತ್ಸ್ನಾ ರಾಯ್ ಕೋರ್ಟ್ಗೆ ಹೋಗಿರಲಿಲ್ಲ. ಇದರಿಂದ ಸಹ ನ್ಯಾಯಾಧೀಶರು ಜ್ಯೋತ್ಸ್ನಾ ಅವರ ಮೊಬೈಲ್ಗೆ ಕರೆ ಮಾಡಿದ್ದರು. ಆದರೆ, ಆ ಕರೆ ಸ್ವೀಕರಿಸದಿದ್ದಾಗ ನೇರವಾಗಿ ಮನೆಗೆ ಬಂದಿದ್ದರು. ಆಗ ಬೆಡ್ರೂಮ್ನಲ್ಲಿ ಜ್ಯೋತ್ಸ್ನಾ ಒಳಗಿನಿಂದ ಲಾಕ್ ಹಾಕಿಕೊಂಡಿರುವುದು ಗೊತ್ತಾಗಿದೆ. ನಂತರ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಡ್ ರೂಮ್ನ ಬಾಗಿಲು ಒಡೆದಿದ್ದಾರೆ. ಬೆಡ್ ರೂಮ್ ಪಕ್ಕದ ಕೊಠಡಿಯಲ್ಲಿ ನ್ಯಾಯಾಧೀಶೆ ಜ್ಯೋತ್ಸ್ನಾ ಶವ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೇ, ಘಟನಾ ಸ್ಥಳದಲ್ಲಿ ಡೆತ್ನೋಟ್ ಸಹ ದೊರೆತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.