ಪತ್ತನಂತಿಟ್ಟ: ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಹದಿಹರೆಯದ ಬಾಲಕಿಯ ಮೇಲೆ ಪದೇ ಪದೇ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ರಾಜ್ಯದ ಐದು ಪೊಲೀಸ್ ಠಾಣೆಗಳಲ್ಲಿ 29 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 43 ಜನರನ್ನು ಬಂಧಿಸಿದೆ.
ಸುಮಾರು 62 ಜನರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತ ಬಾಲಕಿಯು ಆಘಾತಕಾರಿ ವಿವರಗಳನ್ನು ಬಹಿರಂಗ ಪಡಿಸಿದ ನಂತರ ಪ್ರಕರಣದ ತನಿಖೆ ವಿಶಾಲವಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಭಾನುವಾರ ಒಂದೇ ದಿನ 13 ಹೊಸ ಪ್ರಕರಣಗಳು ದಾಖಲಾಗಿದ್ದು, ಸಂತ್ರಸ್ತೆಯ ಡೈರಿ ಮತ್ತು ಆಕೆಯ ತಂದೆಯ ಮೊಬೈಲ್ ಫೋನ್ ಅನ್ನು ಎಸ್ಐಟಿ ವಿಶ್ಲೇಷಿಸಿದ ನಂತರ ಸಿಕ್ಕ ಮಾಹಿತಿಗಳ ಆಧಾರದ ಮೇಲೆ ಮತ್ತೆ ಆರು ಜನರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆ. ಅಲ್ಲದೇ ಮುಂದಿನ ತಿಂಗಳು ನಡೆಯಲಿರುವ 12 ನೇ ತರಗತಿಯ ಅಂತಿಮ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನಾಲ್ವರು ವಿದ್ಯಾರ್ಥಿಗಳು ಕೂಡ ಆರೋಪಿಗಳಾಗಿದ್ದಾರೆ. ಪ್ರಸ್ತುತ ವಿದೇಶದಲ್ಲಿ ವಾಸಿಸುತ್ತಿರುವ ಹಲವಾರು ಆರೋಪಿಗಳನ್ನು ಎಸ್ಐಟಿ ಗುರುತಿಸಿದೆ. ಬಂಧಿತರಲ್ಲಿ ಹೆಚ್ಚಿನವರು 17 ರಿಂದ 28 ವರ್ಷದೊಳಗಿನವರಾಗಿದ್ದಾರೆ.
ಜಿಲ್ಲೆಯಲ್ಲಿನ ನಿರ್ಜನ ರಬ್ಬರ್ ತೋಟಗಳು, ವಾಹನಗಳು ಮತ್ತು ಇತರ ಸ್ಥಳಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ತಾನು 13 ವರ್ಷದವಳಿದ್ದಾಗ ಲೈಂಗಿಕ ದೌರ್ಜನ್ಯಗಳು ಆರಂಭವಾಗಿದ್ದು, ಪರಿಚಿತರು, ತರಬೇತುದಾರರು, ಹಿರಿಯ ಕ್ರೀಡಾಪಟುಗಳು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆಕೆ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಆಯೋಜಿಸಿದ್ದ ಕೌನ್ಸೆಲಿಂಗ್ ಸಭೆಯಲ್ಲಿ ಆಕೆಯ ಶಿಕ್ಷಕರು ಅವಳಲ್ಲಿ ವರ್ತನೆಯ ಬದಲಾವಣೆಗಳು ಕಂಡು ಬಂದಿವೆ ಎಂದು ತಿಳಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಸಭೆಯಲ್ಲಿ ಸಂತ್ರಸ್ತೆ ತನ್ನ ಮೇಲಾದ ದೌರ್ಜನ್ಯಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾಳೆ. ನಂತರ ಸಿಡಬ್ಲ್ಯೂಸಿ ಈ ಪ್ರಕರಣವನ್ನು ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ವರ್ಗಾಯಿಸಿದೆ.
ಈಗ 18 ವರ್ಷದವಳಾಗಿರುವ ಸಂತ್ರಸ್ತೆ ತನ್ನ ಆರಂಭಿಕ ಹೇಳಿಕೆಯಲ್ಲಿ 40 ಶಂಕಿತರ ಹೆಸರುಗಳನ್ನು ನೀಡಿದ್ದಾಳೆ. ಇವರೆಲ್ಲರ ಪೋನ್ ನಂಬರುಗಳು ಆಕೆಯ ತಂದೆಯ ಮೊಬೈಲ್ನಲ್ಲಿ ಸೇವ್ ಆಗಿವೆ. ಘಟನೆಯ ಬಗ್ಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ : 4 ಮಕ್ಕಳಿಗೆ ಜನ್ಮ ನೀಡಿದ ದಂಪತಿಗೆ ₹1 ಲಕ್ಷ ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ - MP BRAHMIN BOARD