ಮೀರತ್: ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಕ್ರಿಮಿನಲ್, ದರೋಡೆಕೋರ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ನ ಪ್ರಮುಖ ಸದಸ್ಯ ಸೋನು ಮಟ್ಕಾ ಎಂಬಾತ ಮೃತಪಟ್ಟಿದ್ದಾನೆ. ಟಿಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೀರತ್ - ಡೆಹ್ರಾಡೂನ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ದೆಹಲಿ ಪೊಲೀಸ್ ವಿಶೇಷ ಸೆಲ್ ಮತ್ತು ಮೀರತ್ ಎಸ್‌ಟಿಎಫ್ (ವಿಶೇಷ ಕಾರ್ಯಪಡೆ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುಂಡು ತಿಂದ ಸೋನು, ಹತನಾಗಿರುವುದಾಗಿ ತಿಳಿದು ಬಂದಿದೆ. ಮೃತ ಗ್ಯಾಂಗ್ಸ್ಟರ್ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳಿದ್ದು, ಪೊಲೀಸ್ ಇಲಾಖೆ ಆತನ ತಲೆಗೆ 50 ಸಾವಿರ ರೂ. ಬಹುಮಾನ ಘೋಷಿಸಿತ್ತು.
ಎನ್‌ಕೌಂಟರ್ ನಡೆದ ಸ್ಥಳ (ETV Bharat) ದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಸೋನು ಮಟ್ಕಾ ವಿರುದ್ಧ ಕೊಲೆ ಮತ್ತು ದರೋಡೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ತಲೆಮರೆಸಿಕೊಂಡು ಓಡಾಡುತ್ತಿದ್ದ. ಕಳೆದ ದೀಪಾವಳಿ ದಿನ ದೆಹಲಿಯ ಶಹದಾರದಲ್ಲಿ ಜೋಡಿ ಕೊಲೆ ಮಾಡಿದ್ದ ಕಾಣೆಯಾಗಿದ್ದ. ಅಂದಿನಿಂದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
ಸೋನು ಮಟ್ಕಾ ಹಾಶಿಮ್ ಬಾಬಾ ಗ್ಯಾಂಗ್‌ನ ಕುಖ್ಯಾತ ಶೂಟರ್ ಆಗಿದ್ದು, ಉತ್ತರ ಪ್ರದೇಶ ಮತ್ತು ದೆಹಲಿ ಸೇರಿ ಈತನ ವಿರುದ್ಧ ಅನೇಕ ದರೋಡೆ ಮತ್ತು ಕೊಲೆ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ ಮೀರತ್ಗೆ ಬಂದಿರುವ ಮಾಹಿತಿ ಇತ್ತು. ತಕ್ಷಣ ಅಲರ್ಟ್ ಆದ ದಿಲ್ಲಿ ಪೊಲೀಸ್ ವಿಶೇಷ ಘಟಕ ಮತ್ತು ಎಸ್‌ಟಿಎಫ್ ತಂಡ ಸೋನು ಮಟ್ಕಾ ಸುತ್ತುವರೆದಿತ್ತು. ಈ ವಿಷಯ ತಿಳಿದು ಆತ ಪರಾರಿಯಾಗಲು ಪ್ರಯತ್ನಿಸುತ್ತಿದ್ದ. ಶನಿವಾರ ಬೆಳಗ್ಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆತನಿಗೆ ಗುಂಡು ತಾಗಿದ್ದು, ಮೃತಪಟ್ಟಿರುವುದಾಗಿ ಮೀರತ್ ಎಸ್‌ಟಿಎಫ್ ಎಎಸ್‌ಪಿ ಬ್ರಿಜೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪೊಲೀಸರು ಆತನನ್ನು ಬೆನ್ನಟ್ಟಿದಾಗ ಆತ ಗುಂಡು ಹಾರಿಸಿದ್ದು, 5 ರಿಂದ 6 ಗುಂಡುಗಳು ಪೊಲೀಸರತ್ತ ಹಾರಿ ಬಂದಿವೆ. ಪೊಲೀಸರೂ ಪ್ರತಿದಾಳಿ ನಡೆಸಿದ್ದು, ಈ ವೇಳೆ, ಗುಂಡು ತಿಂದ ಸೋನು ಬೈಕ್‌ನಿಂದ ಬಿದ್ದಿದ್ದಾನೆ. ತಕ್ಷಣ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಆತನ ಸಾವು ಬಗ್ಗೆ ಖಚಿತಪಡಿಸಿರುವುದಾಗಿ ತಿಳಿಸಿದ್ದಾರೆ.
ಮೃತ ಸೋನು ಮಟ್ಕಾ ಮೂಲತಃ ಬಾಗ್ಪತ್ ನಿವಾಸಿಯಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದನು. ದೆಹಲಿಯಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳಲ್ಲಿ ಈತನ ಪಾತ್ರವಿತ್ತು. ಹಾಶಿಮ್ ಬಾಬಾ ಮತ್ತು ಉಮೇಶ್ ಪಂಡಿತ್ ಗ್ಯಾಂಗ್ ಜೊತೆ ಸೇರಿ ಇನ್ನಿಲ್ಲದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ದೆಹಲಿ ಪೊಲೀಸ್ ವಿಶೇಷ ದಳದ ಡಿಸಿಪಿ ಪ್ರತೀಕ್ಷಾ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಸುಮಾರು 12-15 ಸುತ್ತಿನ ಗುಂಡಿನ ಚಕಮಕಿ ನಡೆದಿವೆ ಎಂದು ಅವರು ಇದೇ ವೇಳೆ ಹೇಳಿದರು.
ಇದನ್ನೂ ಓದಿ:ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸೆರೆ, ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ - ROWDY SHEETER ARRESTED