ಚೆನ್ನೈ(ತಮಿಳುನಾಡು): ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ತಮಿಳುನಾಡು ಸಂಬಂಧ ಕಲ್ಪಿಸಿದ್ದಕ್ಕಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸಬೇಕು ಎಂದು ಅಡ್ವೊಕೇಟ್ ಜನರಲ್ ಪಿ.ಎಸ್.ರಾಮನ್ ಅವರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಅವರು ನ್ಯಾಯಮೂರ್ತಿ ಜಿ ಜಯಚಂದ್ರ ಅವರ ಪೀಠದ ಮುಂದೆ ಈ ಮನವಿ ಸಲ್ಲಿಸಿದರು.
ಕಳೆದ ಬಾರಿ ಈ ಅರ್ಜಿ ವಿಚಾರಣೆಗೆ ಬಂದಾಗ ಅರ್ಜಿದಾರರು ಪತ್ರಿಕಾಗೋಷ್ಠಿ ನಡೆಸಿ ಕ್ಷಮೆ ಕೇಳಿದರೆ ಅದನ್ನು ಅಂಗೀಕರಿಸಲಾಗುವುದೇ? ಈ ಕುರಿತು ವಿವರಣೆ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು. ಬುಧವಾರ ಮತ್ತೆ ಈ ಕುರಿತು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ತಮಿಳುನಾಡು ಅಡ್ವೊಕೇಟ್ ಜನರಲ್ ಪಿ.ಎಸ್. ರಾಮನ್ ಅವರು, ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆ ಕುರಿತು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ಕೊಟ್ಟು ಕ್ಷಮೆಯಾಚಿಸಿದರೆ ಪ್ರಕರಣ ರದ್ದುಗೊಳಿಸಬಹುದು. ಅವರ ಕ್ಷಮಾಪಣೆ ಸ್ವೀಕರಿಸಲೂ ಸಿದ್ಧ ಎಂದು ಹೈಕೋರ್ಟ್‌ಗೆ ತಿಳಿಸಿದರು.
ನಾನು ನೀಡಿದ ಹೇಳಿಕೆಗಾಗಿ ಕ್ಷಮೆಯಾಚಿಸುತ್ತೇನೆ. ನನಗೆ ತಮಿಳುನಾಡು ಜನರ ಬಗ್ಗೆ ಗೌರವವಿದೆ. ಇನ್ನು ಮುಂದೆ ಈ ರೀತಿಯ ಹೇಳಿಕೆ ನೀಡುವುದಿಲ್ಲ ಎಂದು ಅರ್ಜಿದಾರರು ಹೇಳಬೇಕು ಎಂದು ಅಡ್ವೊಕೇಟ್ ಜನರಲ್ ಪಿ.ಎಸ್.ರಾಮನ್ ಅವರು ಪೀಠದ ಮುಂದೆ ಮನವಿ ಮಾಡಿಕೊಂಡರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯಿಸಿ ಕ್ಷಮಾಪಣೆ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿದರು. ಮಧ್ಯೆ ಪ್ರವೇಶಿಸಿದ ನ್ಯಾಯ ಪೀಠ, ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿರುವುದರಿಂದ ಅವರು ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸುವುದೇ ಸೂಕ್ತ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಅಧಿಕಾರದಲ್ಲಿರುವರು ಇಂತಹ ಹೇಳಿಕೆಗಳನ್ನು ನೀಡುವಾಗ ಹೆಚ್ಚು ಜಾಗೃತರಾಗಿರಬೇಕು ಎಂದು ಕೂಡ ಹೇಳಿತು. ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸಲು ಕಾಲಾವಕಾಶ ನೀಡಿದ ನ್ಯಾಯಾಧೀಶರು, ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದರು.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಾಂಬ್ ಸ್ಫೋಟಕ್ಕೂ ತಮಿಳುನಾಡಿಗೂ ಸಂಬಂಧವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಕೇಂದ್ರ ಸಚಿವರ ಹೇಳಿಕೆ ಕೂಡ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಸಚಿವರ ಹೇಳಿಕೆ ಕನ್ನಡಿಗರು ಮತ್ತು ತಮಿಳರ ನಡುವೆ ದ್ವೇಷವನ್ನು ಹುಟ್ಟುಹಾಕುವ ಉದ್ದೇಶ ಹೊಂದಿದೆ ಎಂದು ಮಧುರೈನ ತ್ಯಾಗರಾಜನ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಇನ್ನು ತಮ್ಮ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ ಶೋಭಾ ಕರಂದ್ಲಾಜೆ ಕ್ಷಮೆ ಕೂಡ ಯಾಚಿಸಿದ್ದರು.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಕೇರಳ, ತಮಿಳುನಾಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಎನ್ಐಎ