ಗುವಾಹಟಿ (ಅಸ್ಸೋಂ):ಹಾಸನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದೆ. ಇದುವರೆಗೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಸರ್ಕಾರವನ್ನು ಟೀಕಿಸಿದರು.
ಗುವಾಹಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ತಪ್ಪಿತಸ್ಥರ ವಿರುದ್ಧ ಕಾನೂನುರೀತ್ಯಾ ಕ್ರಮ ಜರುಗಿಸಲು ಜೆಡಿಎಸ್ ಪಕ್ಷವೇ ಸೂಚಿಸಿದೆ. ಇದು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಪ್ರಕರಣವಾಗಿದೆ. ಕೇಂದ್ರ ಸರ್ಕಾರ ಕ್ರಮ ಜರುಗಿಸಲು ಸಾಧ್ಯವಿಲ್ಲ. ಪ್ರಿಯಾಂಕಾ ವಾದ್ರಾ ಅವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಯಾವ ಸರ್ಕಾರವಿದೆ. ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾದ ಹೊಣೆ ಯಾರದ್ದು ಎಂದು ಪ್ರಶ್ನಿಸಿದರು.
ಹೆಣ್ಣು ಮಕ್ಕಳ (ಮಾತೃಶಕ್ತಿ) ಪರವಾಗಿ ಬಿಜೆಪಿ ಯಾವಾಗಲೂ ನಿಂತಿರುತ್ತದೆ. ಪಕ್ಷ ತನಿಖೆಯನ್ನು ಬೆಂಬಲಿಸುತ್ತದೆ. ನಮ್ಮ ಪಾಲುದಾರ ಪಕ್ಷವಾದ ಜೆಡಿಎಸ್ ಕೂಡ ಆರೋಪಿ ವಿರುದ್ಧ ಕ್ರಮ ಜರುಗಿಸುವುದಾಗಿ ಘೋಷಿಸಿದೆ. ತನಿಖಾ ತಂಡಕ್ಕೂ ಈ ಬಗ್ಗೆ ಹೇಳಿಕೆ ನೀಡಿದೆ. ಇಷ್ಟಿದ್ದರೂ ಅಲ್ಲಿನ ಸರ್ಕಾರ ತನಿಖೆ ವಿಳಂಬ ಮಾಡುತ್ತಿರುವುದೇಕೆ?. ನಾವು ದೇಶದ ಮಹಿಳೆಯರ ಪರ ಯಾವಾಗಲೂ ಇರುತ್ತೇವೆ. ದೇಶದ ಮಾತೃಶಕ್ತಿ ಜೊತೆ ನಿಲ್ಲುತ್ತೇವೆ ಎಂಬುದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಎಂದರು.
ಧರ್ಮಾಧಾರಿತ ಮೀಸಲಾತಿಗೆ ವಿರೋಧ:ಭಾರತೀಯ ಜನತಾ ಪಕ್ಷವು ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ವಿರೋಧಿಸುತ್ತದೆ. ಇದೊಂದು ಅಸಂವಿಧಾನಿಕ ನಡೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಧರ್ಮದ ಆಧಾರದ ಮೇಲೆ ನೀಡಲಾದ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಕೇಂದ್ರ ಗೃಹ ಸಚಿವರು ಹೇಳಿದರು.