ನವದೆಹಲಿ:ಇಡೀ ದೇಶ 78ನೇ ಸ್ವಾತಂತ್ರ್ಯವ ದಿನದ ಸಂಭ್ರಮ ಆಚರಣೆಯಲ್ಲಿದ್ದು, ಈ ಮಧ್ಯೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ. ಶಾಂತಿ ಕದಡುವ ಉದ್ದೇಶದಿಂದ ಅಸ್ಸೋಂ ವಿವಿಧೆಡೆ 19 ಸ್ಥಳಗಳಲ್ಲಿ ಬಾಂಬ್ ಇರಿಸಿದ್ದು, ತಾಂತ್ರಿಕ ಕಾರಣದಿಂದ ಅವು ಸ್ಫೋಟಗೊಂಡಿಲ್ಲ ಎಂದು ನಿಷೇಧಿತ ಸಂಘಟನೆಯಾಗಿರುವ ಯುನೈಟೆಡ್ ಲಿಬರೇಷನ್ ಫ್ರಂಟ್ ಅಸ್ಸೋಂ- ಇಂಡಿಪೆಂಡೆಂಟ್ (ಉಲ್ಫಾ) ಸ್ಫೋಟಕ ಹೇಳಿಕೆ ನೀಡಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಮ್ಯಾನ್ಮಾರ್ ಮೂಲದ ಸಂಘಟನೆ, ಇದೇ ವೇಳೆ ಯಾವ ಯಾವ ಸ್ಥಳಗಳಲ್ಲಿ ಬಾಂಬ್ ಇರಿಸಲಾಗಿತ್ತು ಎಂದು ಕೂಡ ತಿಳಿಸಿದ್ದು, ಸ್ಥಳೀಯರಿಗೆ ಅದನ್ನು ನಿಷ್ಕ್ರಿಯಗೊಳಿಸುವಂತೆ ಕೋರಿದೆ. ಅದರಲ್ಲಿ 8 ಬಾಂಬ್ಗಳನ್ನು ಗುವಾಹಟಿಯಲ್ಲಿಯೇ ಇರಿಸಲಾಗಿದೆ ಎಂದು ತಿಳಿಸಿದೆ.
ಈ ಪ್ರಕಟಣೆಯಲ್ಲಿ ನಿಷೇಧಿತ ಸಂಘಟನೆಯ ಎರಡನೇ ಲೆಫ್ಟಿನೆಂಟ್ ಇಶಾನ್ ಅಸೊಂ ಸಹಿ ಇದೆ. ಯುನೈಟೆಡ್ ಲಿಬರೇಷನ್ ಫ್ರಂಟ್ ಅಸ್ಸೋಂ (ಇಂಡಿಪೆಂಡೆಟ್) ಸಂಘಟನೆ ಪರವಾಗಿ ಅಸ್ಸೋಂನ ಸ್ಥಳೀಯರಿಗೆ ನೀಡುವ ಮಾಹಿತಿ ಇದಾಗಿದೆ. ಆಗಸ್ಟ್ 15ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಹಲವು ಕಡೆ ಭಯೋತ್ಪಾದಕ ದಾಳಿ ನಡೆಸಲು ನಿಗದಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸ್ಥಳಗಳನ್ನು ಸಾರ್ವಜನಿಕಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.