ಮಹಾಕಾಳೇಶ್ವರ ದೇವಾಲಯದ ಗರ್ಭಗೃಹದಲ್ಲಿ ಬೆಂಕಿ ಅವಘಡ ಉಜ್ಜಯಿನಿ(ಮಧ್ಯಪ್ರದೇಶ):ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ಇಂದು ಬೆಳಗ್ಗೆ ಭಸ್ಮಾರತಿ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, 14 ಮಂದಿ ಅರ್ಚಕರು ಗಾಯಗೊಂಡಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಗರ್ಭಗುಡಿಯೊಳಗೆ ಭಸ್ಮಾರತಿ ಬೆಳಗಿ ಬಣ್ಣ ಅರ್ಪಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದುಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.
9 ಮಂದಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಸಚಿವ ಕೈಲಾಶ್ ವಿಜಯವರ್ಗಿಯಾ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಪೂಜಾರಿ ಸತ್ಯನಾರಾಯಣ್ ಸೋನಿ, ಚಿಂತಾಮನ್, ರಮೇಶ್, ಅಂಶ್ ಶರ್ಮಾ, ಶುಭಂ, ವಿಕಾಸ್, ಮಹೇಶ್ ಶರ್ಮಾ, ಮನೋಜ್ ಶರ್ಮಾ, ಸಂಜಯ್, ಆನಂದ್, ಸೋನು ರಾಥೋಡ್, ರಾಜಕುಮಾರ್ ಬೈಸ್, ಕಮಲ್, ಮಂಗಲ್ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಉಜ್ಜಯಿನಿ ಐಜಿ ಸಂತೋಷ್ ಕುಮಾರ್ ಸಿಂಗ್, ಆಯುಕ್ತ ಸಂಜಯ್ ಗುಪ್ತಾ ಮತ್ತು ಜಿಲ್ಲಾಧಿಕಾರಿ ನೀರಜ್ ಕುಮಾರ್ ಸಿಂಗ್ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಸ್ಥಿತಿಗತಿ ವಿಚಾರಿಸಿದರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಸಿಯಿಸಿದ ಜಿಲ್ಲಾಧಿಕಾರಿ ನೀರಜ್ ಕುಮಾರ್ ಸಿಂಗ್, "ಘಟನೆಯ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಲಾಗಿದೆ. ತನಿಖಾ ತಂಡದಲ್ಲಿ ಎಡಿಎಂ ಅನುಕಲ್ ಜೈನ್, ಎಡಿಎಂ ಮೃಣಾಲ್ ಮೀನಾ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ. ಅವಘಡಕ್ಕೆ ಹೋಲಿ ಬಣ್ಣ ಕಾರಣವೇ ಅಥವಾ ಇನ್ನೇನಾದರೂ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆಯೇ ಎಂಬುದು ಖಚಿತವಾಗಲಿದೆ" ಎಂದು ತಿಳಿಸಿದರು.
ಸಿಎಂ ಪ್ರತಿಕ್ರಿಯೆ:ಘಟನೆಗೆ ಸಿಎಂ ಮೋಹನ್ ಯಾದವ್ ಪ್ರತಿಕ್ರಿಯಿಸಿ, "ಇಂದು ಬೆಳಗ್ಗೆ ಬಾಬಾ ಮಹಾಕಾಳ್ ದೇವಸ್ಥಾನದ ಗರ್ಭಗುಡಿಯಲ್ಲಿ ಭಸ್ಮಾರತಿ ವೇಳೆ ಸಂಭವಿಸಿದ ಅವಘಡ ದುಃಖಕರವಾಗಿದೆ. ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಎಲ್ಲವೂ ನಿಯಂತ್ರಣದಲ್ಲಿದೆ' ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಮೊಬೈಲ್ ಚಾರ್ಜರ್ ಕಿಡಿಯಿಂದ ಮನೆಗೆ ಹೊತ್ತುಕೊಂಡ ಬೆಂಕಿ; 4 ಮಕ್ಕಳು ಸಜೀವ ದಹನ, ಪೋಷಕರ ಸ್ಥಿತಿ ಗಂಭೀರ - House burnt due to spark