ಮಧುರೈ (ತಮಿಳುನಾಡು):ಇಲ್ಲಿನ ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್‌ನಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಇದರಲ್ಲಿ ಓರ್ವ ಶಿಕ್ಷಕಿ ಇದ್ದಾರೆ. ಐದಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಎಲ್ಲರನ್ನೂ ಸಮೀಪದ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಸತಿ ನಿಲಯದಲ್ಲಿ 40ಕ್ಕೂ ಹೆಚ್ಚು ಮಹಿಳೆಯರು ವಾಸವಿದ್ದರು ಎಂದು ತಿಳಿದು ಬಂದಿದೆ.
ಮಧುರೈ ಪೆರಿಯಾರ್ ಪ್ರದೇಶದಲ್ಲಿವು ವಾಣಿಜ್ಯಿಕವಾಗಿ ಪ್ರಮುಖವಾಗಿದ್ದು, ಉದ್ಯೋಗಸ್ಥ ಮಹಿಳೆಯರಿಗಾಗಿ ಖಾಸಗಿ ಹಾಸ್ಟೆಲ್ ನಡೆಸಲಾಗುತ್ತಿದೆ. ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ದೊಡ್ಡ ಸ್ಫೋಟದೊಂದಿಗೆ ರೆಫ್ರಿಜರೇಟರ್ ಸಿಡಿದಿದ್ದು, ಬೆಂಕಿ ಹೊತ್ತಿಕೊಂಡಿದೆ. ಕಟ್ಟಡದಲ್ಲಿದ್ದ ಮಹಿಳೆಯ ಪೈಕಿ ಪರಿಮಳಾ ಸೌಂದರ್ಯ ಮತ್ತು ಶರಣ್ಯ ಎಂಬಿಬ್ಬರು ಬೆಂಕಿಗೆ ಬಲಿಯಾಗಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೆರಿಯಾರ್ ಬಸ್ ನಿಲ್ದಾಣದ ಅಗ್ನಿಶಾಮಕ ದಳ ಮತ್ತು ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ವ್ಯಾಪಿಸಿಕೊಂಡಿದ್ದ ಅಗ್ನಿಯನ್ನು ನಂದಿಸಿದ್ದಾರೆ. ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತಿಲಕರ್ ಥಿಯೇಟರ್ ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.
ಹಾಸ್ಟೆಲ್ ಕಟ್ಟಡದ ಮಾಲೀಕ ಅರೆಸ್ಟ್:ಬೆಂಕಿ ಅವಘಡಕ್ಕೂ ಮುನ್ನ ಮಧುರೈ ಕಾರ್ಪೊರೇಷನ್ ಅಧಿಕಾರಿಗಳು ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು. ಕಟ್ಟಡ ಹಳೆಯದಾದ ಕಾರಣ ಅದನ್ನು ಕೆಡವಲು ಸೂಚಿಸಿದ್ದರು. ಆದರೆ, ಕಟ್ಟಡ ಮಾಲೀಕರು ಇದಕ್ಕೆ ಸ್ಪಂದಿಸಿರಲಿಲ್ಲ. ಇದೀಗ ದುರಂತ ಸಂಭವಿಸಿದ್ದು, ಮಧುರೈ ಕಾರ್ಪೊರೇಷನ್ ಕಮಿಷನರ್ ವಿನೋದ್ ಕುಮಾರ್ ಮತ್ತು ಆರ್ಟಿಒ ಶಾಲಿನಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಕಟ್ಟಡದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:4 ದಶಕಗಳ ಬಳಿಕ ಜಮ್ಮು- ಕಾಶ್ಮೀರದಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ: ಫೈನಲ್ ಪಂದ್ಯವೂ ಇಲ್ಲೇ! - cricket tourney in JK