ಭುವನೇಶ್ವರ್ (ಒಡಿಶಾ): ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಮಹಾನದಿಯಲ್ಲಿ ಶುಕ್ರವಾರ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವ ಆರು ಜನರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಯ ಛತ್ತೀಸ್‌ಗಢದ ಖಾರ್ಸಿಯಾ ಪ್ರದೇಶದ ಸುಮಾರು 50 ಪ್ರಯಾಣಿಕರು ಒಡಿಶಾದ ಬರ್ಗಢ್ ಜಿಲ್ಲೆಯ ಪಥರ್ಸೇನಿ ಕುಡಾದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದೋಣಿಯಲ್ಲಿ ಹಿಂದಿರುಗುತ್ತಿರುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಜಾರ್ಸುಗುಡಾ ಜಿಲ್ಲೆಯ ರೆಂಗಾಲಿ ಪೊಲೀಸ್ ಠಾಣೆಯ ಸಾರದಾ ಘಾಟ್‌ಗೆ ತಲುಪಲು ಮುಂದಾದಾಗ ದೋಣಿ ಮಗುಚಿ ಬಿದ್ದಿದೆ. ಸ್ಥಳೀಯ ಮೀನುಗಾರರು 35 ಪ್ರಯಾಣಿಕರನ್ನು ರಕ್ಷಿಸಿ ದಡಕ್ಕೆ ಕರೆತಂದರು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಏಳು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಇನ್ನೂ ಆರು ಪ್ರಯಾಣಿಕರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಾಪತ್ತೆಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಇವರು ಪತ್ತೆಯಾಗುವವರೆಗೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ. ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮತ್ತು ಕನಿಷ್ಠ ಐದು ಸ್ಕೂಬಾ ಡೈವರ್‌ಗಳು ಮತ್ತು ಎರಡು ನೀರೊಳಗಿನ ಶೋಧ ಕ್ಯಾಮೆರಾಗಳನ್ನು ಶೋಧ ಕಾರ್ಯಾಚರಣೆಗೆ ಬಳಕೆ ಮಾಡಲಾಗಿದೆ. ODRAF (ಒಡಿಶಾ ಡಿಸಾಸ್ಟರ್ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್) ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ'' ಎಂದು ಉತ್ತರ ರೇಂಜ್ ಐಜಿ ಹಿಮಾಂಶು ಲಾಲ್ ಮಾಹಿತಿ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ಮತ್ತು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಸತ್ಯಬ್ರತ ಸಾಹು ಅವರು ಭುವನೇಶ್ವರ್‌ನಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಂದಾಯ ವಿಭಾಗೀಯ ಆಯುಕ್ತ (ಆರ್‌ಡಿಸಿ), ಜಾರ್ಸುಗುಡಾ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ನದಿ ದಡದಲ್ಲಿ ಬೀಡು ಬಿಟ್ಟಿದ್ದು, ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.