ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ರಾತ್ರಿ ಎರಡು ಕಡೆ ಭಯೋತ್ಪಾದಕ ದಾಳಿ ನಡೆದಿದೆ. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತ, ಮಾಜಿ ಸರಪಂಚ್ವೊಬ್ಬರು ಕೊಲೆಯಾಗಿದ್ದರೆ, ಅನಂತನಾಗ್ ಜಿಲ್ಲೆಯಲ್ಲಿ ಜರುಗಿದ ದಾಳಿಯಲ್ಲಿ ರಾಜಸ್ಥಾನ ಮೂಲದ ಪ್ರವಾಸಿ ದಂಪತಿ ಗಾಯಗೊಂಡಿದ್ದಾರೆ.
ಬಾರಾಮುಲ್ಲಾದಲ್ಲಿ ಲೋಕಸಭೆ ಚುನಾವಣೆಗೆ ಎರಡು ದಿನಗಳ ಬಾಕಿ ಇರುವಾಗ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಅವಳಿ ಭಯೋತ್ಪಾದಕ ದಾಳಿಗಳು ನಡೆದಿವೆ. ಮೊದಲ ದಾಳಿಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬಯಲು ಪ್ರವಾಸಿ ಶಿಬಿರದ ಮೇಲೆ ಜರುಗಿದೆ. ಇದಾದ ಅರ್ಧ ಗಂಟೆಯೊಳಗೆ ಎರಡನೆಯ ದಾಳಿಯು ಶೋಪಿಯಾನ್ ಜಿಲ್ಲೆಯ ಹಿರ್ಪೋರಾದಲ್ಲಿ ನಡೆದಿದ್ದು, ಮಾಜಿ ಸರಪಂಚ್ ಐಜಾಜ್ ಅಹ್ಮದ್ ಶೇಖ್ ಸಾವನ್ನಪ್ಪಿದ್ದಾರೆ.
ಪ್ರವಾಸಿ ಶಿಬಿರದ ಮೇಲೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ರಾಜಸ್ಥಾನದ ಜೈಪುರ ನಿವಾಸಿಗಳಾದ ಫರ್ಹಾ ಮತ್ತು ಪತಿ ತಬ್ರೇಜ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ದಾಳಿಯಲ್ಲಿ ಐಜಾಜ್ ಶೇಖ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತ್‌ನಾಗ್-ರಜೌರಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ನಡೆಯುತ್ತಿದೆ. ಸೋಮವಾರ ಐದನೇ ಹಂತದ ಚುನಾವಣೆಯಲ್ಲಿ ಬಾರಾಮುಲ್ಲಾದಲ್ಲಿ ಮತದಾನ ನಡೆಯಲಿದೆ. ಇದಕ್ಕೂ ಮುಂಚೆ ಈ ಅವಳಿ ದಾಳಿಗಳು ನಡೆದಿವೆ. ಈ ದಾಳಿಗಳನ್ನು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಖಂಡಿಸಿವೆ.
ಬಿಜೆಪಿ ಪ್ರತಿಭಟನೆ: ಅಲ್ಲದೇ, ಪಕ್ಷದ ಕಾರ್ಯಕರ್ತನ ಹತ್ಯೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿದೆ. ಭಯೋತ್ಪಾದಕ ಬೆದರಿಕೆಗಳನ್ನು ಎದುರಿಸುತ್ತಿರುವ ಕೆಲವು ಪ್ರಮುಖ ಕಾರ್ಯಕರ್ತರಿಗೆ ಭದ್ರತೆಗಾಗಿ ಮಾಡಿದ ಮನವಿಯನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತ ನಿರ್ಲಕ್ಷಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶೋಪಿಯಾನ್ನಲ್ಲಿರುವ 'ಮಿನಿ ಸೆಕ್ರೆಟರಿಯೇಟ್' ಹೊರಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಗತ್ಯ ಭದ್ರತೆ ಕಲ್ಪಿಸುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗಾಯಾಳುಗಳ ಏರ್ಲಿಫ್ಟ್ಗೆ ಮನವಿ: ಮತ್ತೊಂದೆಡೆ, ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಯಲ್ಲಿ ಗಾಯಗೊಂಡಿರುವ ರಾಜಸ್ಥಾನದ ಪ್ರವಾಸಿಗಳಾದ ಫರ್ಹಾ ಮತ್ತು ತಬ್ರೇಜ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಮಾನದ ಮೂಲಕ ದೆಹಲಿಯ ಏಮ್ಸ್‌ಗೆ ಶಿಫ್ಟ್ ಮಾಡಬೇಕೆಂದು ಜೈಪುರದಲ್ಲಿರುವ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಜೈಪುರದಲ್ಲಿ 'ಈಟಿವಿ ಭಾರತ್' ಜೊತೆ ಮಾತನಾಡಿದ ಗಾಯಾಳು ತಬ್ರೇಜ್ ತಂದೆ ಅಸ್ಲಾಂ ಖಾನ್, ತನ್ನ ಮಗ ಮತ್ತು ಸೊಸೆ ಸುಮಾರು 50 ಜನ ಪ್ರವಾಸಿಗರ ಗುಂಪಿನೊಂದಿಗೆ ಕಾಶ್ಮೀರಕ್ಕೆ ಹೋಗಿದ್ದಾರೆ. ಪಹಲ್ಗಾಮ್‌ಗೆ ಭೇಟಿ ತಬ್ರೇಜ್ ದಂಪತಿ ಶನಿವಾರ ಸಂಜೆ ಯನ್ನಾರ್ ರೆಸಾರ್ಟ್‌ಗೆ ಊಟಕ್ಕೆ ತೆರಳಿದ್ದರು. ಅಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದಾಳಿಕೋರರು ಗುಂಡು ಹಾರಿಸಿದ್ದಾರೆ. ಫರ್ಹಾ ಮತ್ತು ತಬ್ರೇಜ್ ಗಾಯಗೊಂಡಿದ್ದಾರೆ. ಫರ್ಹಾ ಸ್ಥಿತಿ ಸ್ಥಿರವಾಗಿದೆ. ಆದರೆ ತಬ್ರೇಜ್ ಸ್ಥಿತಿ ಕಳವಳಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ತಬ್ರೇಜ್ ದಂಪತಿಯನ್ನು ಅನಂತನಾಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 3 ಗಂಟೆಗೆ ತಬ್ರೇಜ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಐಸಿಯುನಲ್ಲಿದ್ದಾರೆ ಎಂದು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಇಬ್ಬರನ್ನೂ ವಿಮಾನದಲ್ಲಿ ದೆಹಲಿಯ ಏಮ್ಸ್‌ಗೆ ದಾಖಲಿಸಲು ನೆರವಾಗಬೇಕೆಂದು ನಾನು ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಸಹಾಯಕ ಅರಣ್ಯ ವಲಯ ಅಧಿಕಾರಿ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಅರೆಸ್ಟ್