ಕರ್ನಾಟಕ

karnataka

ETV Bharat / bharat

ವಿದ್ಯಾರ್ಥಿಗಳಲ್ಲೂ ಎಚ್​ಐವಿ ಸೋಂಕು ತೀವ್ರ ಹೆಚ್ಚಳ: ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ತ್ರಿಪುರಾ ಹೈಕೋರ್ಟ್​ ನೋಟಿಸ್ - HIV cases in Tripura

ವಿದ್ಯಾರ್ಥಿಗಳಲ್ಲಿಯೂ ಎಚ್​ಐವಿ ಏಡ್ಸ್​ ಸೋಂಕು ಹೆಚ್ಚಾಗುತ್ತಿರುವುದರ ಬಗ್ಗೆ ತ್ರಿಪುರಾ ಹೈಕೋರ್ಟ್​ ಕಳವಳ ವ್ಯಕ್ತಪಡಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jul 26, 2024, 4:58 PM IST

ಅಗರ್ತಲಾ: ರಾಜ್ಯದಲ್ಲಿ ಹೆಚ್ಚುತ್ತಿರುವ ಎಚ್ಐವಿ ಪ್ರಕರಣಗಳ ಬಗ್ಗೆ ಎರಡು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ತ್ರಿಪುರಾ ಉಚ್ಚ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಕುರಿತು ಸಲ್ಲಿಸಲಾದ ಪಿಐಎಲ್​ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.

ವಿಶೇಷವಾಗಿ ರಾಜ್ಯದ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಎಚ್ಐವಿ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಆತಂಕಕಾರಿ ಹೆಚ್ಚಳವಾಗಿರುವ ವರದಿಗಳ ನಂತರ ಹೈಕೋರ್ಟ್ ಈ ಪಿಐಎಲ್ ಅನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಎಚ್​ಐವಿ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಗಂಭೀರತೆ ಬಗ್ಗೆ ಹೈಕೋರ್ಟ್​ ನ್ಯಾಯಮೂರ್ತಿ ಟಿ. ಅಮರನಾಥ್ ಗೌಡ್ ಉಚ್ಚ ನ್ಯಾಯಾಲಯಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಮತ್ತು ನ್ಯಾಯಮೂರ್ತಿ ಅರಿಂದಮ್ ಲೋಧ್ ಅವರನ್ನೊಳಗೊಂಡ ಹೈಕೋರ್ಟ್​ನ ವಿಭಾಗೀಯ ಪೀಠವು ಈ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

ಗಡಿ ರಾಜ್ಯ ತ್ರಿಪುರಾದಲ್ಲಿ ಹೆಚ್ಚುತ್ತಿರುವ ಎಚ್ಐವಿ ಪ್ರಕರಣಗಳ ಬಗ್ಗೆ ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ಪ್ರಕರಣಗಳನ್ನು ಗುರುತಿಸಬೇಕು ಮತ್ತು ಶೀಘ್ರವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಗಮನಿಸಿದೆ.

ಎಚ್ಐವಿ ಪ್ರಕರಣ ಹೆಚ್ಚಳದ ಹಿಂದಿನ ಕಾರಣಗಳು, ಪ್ರಸ್ತುತ ಜಾರಿಯಲ್ಲಿರುವ ಕ್ರಮಗಳು ಮತ್ತು ತ್ರಿಪುರಾದಲ್ಲಿ ರೋಗ ಹರಡಲು ಪ್ರಮುಖ ಅಂಶವಾದ ಇಂಜೆಕ್ಷನ್ ಮೂಲಕ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಚುಚ್ಚಿಕೊಳ್ಳುವುದನ್ನು ತಡೆಯುವ ತಂತ್ರಗಳನ್ನು ವಿವರಿಸುವಂತೆ ಹೈಕೋರ್ಟ್ ಸರ್ಕಾರಗಳನ್ನು ಕೇಳಿದೆ.

ಏಪ್ರಿಲ್ 2007 ಮತ್ತು ಮೇ 2024 ರ ನಡುವೆ, 828 ವಿದ್ಯಾರ್ಥಿಗಳು ಪಿಎಲ್ಎಚ್ಐವಿ (ಪೀಪಲ್ ಲಿವಿಂಗ್ ವಿತ್ ಎಚ್ಐವಿ) ಎಂದು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 47 ವಿದ್ಯಾರ್ಥಿಗಳು ತಮ್ಮ 17ನೇ ವಯಸ್ಸಿಗೇ ನಿಧನರಾಗಿದ್ದಾರೆ.

ಈ ಬಗ್ಗೆ ಮಾತನಾಡಿ ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕಿ ಸಮರ್ಪಿತಾ ದತ್ತಾ, 2022-23ರಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 67 ಜನರು ಸಾವನ್ನಪ್ಪಿದ್ದರೆ, 2023-24ರಲ್ಲಿ 44 ಜನ ಎಚ್ಐವಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ, ತ್ರಿಪುರಾದಲ್ಲಿ ಸರಿಸುಮಾರು 8,000 ಎಚ್ಐವಿ-ಪಾಸಿಟಿವ್ ಪ್ರಕರಣಗಳಿವೆ. ಆದರೆ ಈ ಅಂಕಿ ಅಂಶಗಳು ವಾಸ್ತವ ಸಂಖ್ಯೆಯ ಒಂದು ಸಣ್ಣ ಪ್ರಮಾಣವನ್ನು ಮಾತ್ರ ಪ್ರತಿನಿಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅನೇಕ ಜನರ ಎಚ್​ಐವಿ ಸೋಂಕು ಪತ್ತೆಯೇ ಆಗದಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿದೆ.

1996 ರಲ್ಲಿ ರಾಜ್ಯದಲ್ಲಿ ಪ್ರಥಮ ಎಚ್​ಐವಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ, ಸೋಂಕುಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ವಿಶೇಷವಾಗಿ ರಕ್ತನಾಳದ ಔಷಧಿಗಳನ್ನು ಬಳಸುವ ಯುವಕರು, ಮಹಿಳಾ ಲೈಂಗಿಕ ಕಾರ್ಯಕರ್ತರು, ಟ್ರಕ್ ಚಾಲಕರು, ವಲಸಿಗರು ಮತ್ತು ಸಲಿಂಗಕಾಮಿಗಳಂತಹ ಹೆಚ್ಚಿನ ಅಪಾಯದ ಜನರಲ್ಲಿ ಎಚ್​ಐವಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಗರಣದ ಕುರಿತು ರಾಜ್ಯಸಭಾ ಕಲಾಪದಲ್ಲಿ ಚರ್ಚೆ: ಗದ್ದಲ - ಕೋಲಾಹಲ ಸೃಷ್ಟಿ - Valmiki Corporation Scam

ABOUT THE AUTHOR

...view details