ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದು, ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಡಾ.ಸಿಂಗ್ ಅವರು ಪ್ರಧಾನಮಂತ್ರಿ ಮತ್ತು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಮಾತ್ರವಲ್ಲದೇ ಲೇಖಕರೂ ಆಗಿದ್ದರು ಎಂಬುದು ವಿಶೇಷ. ಡಾ.ಸಿಂಗ್ ಅವರ ಬರಹಗಳು ಭಾರತದ ಆರ್ಥಿಕ ನೀತಿಗಳು, ಭೌಗೋಳಿಕ ರಾಜಕೀಯ ಹಾಗೂ ತಮ್ಮ ವೈಯಕ್ತಿಕ ಜೀವನದ ಒಳನೋಟವನ್ನು ತೆರೆದಿಡುತ್ತವೆ.
1.ಇಂಡಿಯಾಸ್ ಎಕ್ಸ್ಪೋರ್ಟ್ ಟ್ರೆಂಡ್ಸ್ ಆ್ಯಂಡ್ ಪ್ರಾಸ್ಪೆಕ್ಟ್ಸ್ ಫಾರ್ ಸೆಲ್ಫ್-ಸಸ್ಟೈನ್ ಗ್ರೋಥ್: 1964ರಲ್ಲಿ ಪ್ರಕಟವಾದ ಈ ಕೃತಿಯು ಭಾರತದ ಆಂತರಿಕ ವ್ಯಾಪಾರ ನೀತಿಗಳನ್ನು ಟೀಕಿಸುತ್ತದೆ ಮತ್ತು ರಫ್ತು ಆಧರಿತ ಬೆಳವಣಿಗೆಯನ್ನು ಪ್ರತಿಪಾದಿಸುತ್ತದೆ. ಈ ಪುಸ್ತಕದಲ್ಲಿ ಡಾ.ಸಿಂಗ್, ದೇಶದ ರಫ್ತು ಕಾರ್ಯಕ್ಷಮತೆಗೆ ಅಡ್ಡಿಯಾದ ಸವಾಲುಗಳನ್ನು ವಿಶ್ಲೇಷಿಸಿದ್ದಾರೆ. ಸ್ವಯಂ-ಸುಸ್ಥಿರ ಬೆಳವಣಿಗೆ ಸಾಧಿಸಲು ಕೆಲವು ನೀತಿಗಳನ್ನು ಶಿಫಾರಸು ಮಾಡಿದ್ದಾರೆ.
2.ಚೇಂಜಿಂಗ್ ಇಂಡಿಯಾ:2018ರಲ್ಲಿ ಬಿಡುಗಡೆಯಾದ ಐದು ಸಂಪುಟಗಳ ಸಂಗ್ರಹವು ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಕುರಿತು ಡಾ.ಸಿಂಗ್ ಅವರ ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಸಂಗ್ರಹವು ಆರ್ಥಿಕ ಸುಧಾರಣೆಗಳು, ಆಡಳಿತ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪಾತ್ರ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿದೆ.
3.ಇಂಡಿಯಾಸ್ ಎಕನಾಮಿಕ್ ರೆಫಾರ್ಮ್ಸ್ ಆ್ಯಂಡ್ ಡೆವಲಪ್ಮೆಂಟ್: ಎಸ್ಸಯ್ಸ್ ಫಾರ್ ಮನಮೋಹನ್ ಸಿಂಗ್:ಇಶರ್ ಜಡ್ಜ್ ಅಹ್ಲುವಾಲಿಯಾ ಮತ್ತು ಐ.ಎಂ.ಡಿ.ಲಿಟಲ್ ಸಂಪಾದಿಸಿದ ಹಾಗೂ 1998ರಲ್ಲಿ ಪ್ರಕಟವಾದ ಈ ಸಂಕಲನವು ಭಾರತದ ಆರ್ಥಿಕ ಸುಧಾರಣೆಗಳಿಗೆ ಡಾ.ಸಿಂಗ್ ಅವರ ಕೊಡುಗೆಗಳನ್ನು ಶ್ಲಾಘಿಸಿರುವ ಪ್ರಮುಖ ಅರ್ಥಶಾಸ್ತ್ರಜ್ಞರ ಪ್ರಬಂಧಗಳನ್ನು ಒಳಗೊಂಡಿದೆ. ಡಾ.ಸಿಂಗ್ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿನ ಸುಧಾರಣೆಗಳ ಪರಿಣಾಮ ಮತ್ತು ಭವಿಷ್ಯದ ದಿಕ್ಕನ್ನು ಪ್ರತಿಬಿಂಬಿಸುವ ಆರ್ಥಿಕ ನೀತಿಯ ವಿವಿಧ ಅಂಶಗಳನ್ನು ಪ್ರಬಂಧಗಳು ಚರ್ಚಿಸುತ್ತವೆ.