ನವದೆಹಲಿ:ಆರೋಗ್ಯ ವಿಮಾ ಪಾಲಿಸಿಗಳಿಗೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್ಟಿಯನ್ನು ಕಡಿಮೆ ಮಾಡುವಂತೆ ಟಿಎಂಸಿಯ ಹಿರಿಯ ನಾಯಕ ಡೆರೆಕ್ ಒ'ಬ್ರಿಯಾನ್ ಸೋಮವಾರ ಸರಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟು ಹಣಕಾಸು ಸಚಿವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದರು.
"ನಮ್ಮ ಬೇಡಿಕೆ ಸರಳವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ವಿಮೆಯ ಮೇಲೆ ಈಗ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್ಟಿಯನ್ನು ಕಡಿಮೆ ಮಾಡಬೇಕು. ಇದು ಜನರಿಗೆ, ಮುಖ್ಯವಾಗಿ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರುವುದರಿಂದ ಇದನ್ನು ಕಡಿಮೆ ಮಾಡಲೇಬೇಕಿದೆ." ಎಂದು ಡೆರೆಕ್ ಹೇಳಿದರು.
ಜಾಗತಿಕವಾಗಿ ಆರೋಗ್ಯ ವಿಮಾ ಪಾಲಿಸಿ ಪಡೆಯುವವರ ಪ್ರಮಾಣ ಶೇಕಡಾ 7 ರಷ್ಟಿದ್ದರೆ, ಇದು ಭಾರತದಲ್ಲಿ ಈಗಲೂ ಶೇ 4ರಷ್ಟಿದೆ ಎಂದು ಟಿಎಂಸಿ ನಾಯಕ ಒ'ಬ್ರಿಯಾನ್ ಸದನದ ಗಮನಸೆಳೆದರು. ವಿಮಾ ಕ್ಷೇತ್ರದಲ್ಲಿ ಶೇಕಡಾ 75 ರಷ್ಟು ಜೀವ ವಿಮಾ ಪಾಲಿಸಿಗಳು ಮತ್ತು ಶೇಕಡಾ 25 ರಷ್ಟು ವೈದ್ಯಕೀಯ ಪಾಲಿಸಿಗಳಿದ್ದು, ಈ ಕ್ಷೇತ್ರದಲ್ಲಿ ಅಸಮತೋಲನವಿದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ ಮತ್ತು ಅನೇಕ ವಿರೋಧ ಪಕ್ಷದ ಸಂಸದರು ಸಹ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಡೆರೆಕ್ ಹೇಳಿದರು.