ಬೆಂಗಳೂರು: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಕರ್ತವ್ಯಲೋಪ ಆರೋಪದ ಮೇಲೆ ಹೆಚ್ಚುವರಿ ಔಷಧ ನಿಯಂತ್ರಕ ಡಾ.ಎಸ್. ಉಮೇಶ್ ಅವರನ್ನು ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸರ್ಕಾರದ ಆದೇಶಕ್ಕೆ ತಡೆ ನೀಡದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಮಧ್ಯಂತರ ಆದೇಶ ಪ್ರಶ್ನಿಸಿ ಡಾ.ಎಸ್. ಉಮೇಶ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 2024ರ ನ.11ರಿಂದ ಡಿ. 5ರ ನಡುವಿನ ಅಲ್ಪಾವಧಿಯಲ್ಲಿ ಕಳಪೆ ಗುಣಮಟ್ಟದ ಔಷಧ ಸೇವಿಸಿ ಐವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಘಟನೆ ಅತ್ಯಂತ ಗಂಭೀರ ವಿಚಾರ. ಸ್ವತಃ ಮುಖ್ಯ ಮಂತ್ರಿಗಳೇ ಈ ವಿಚಾರವನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅವರು ಖುದ್ದಾಗಿ ಭೇಟಿ ನೀಡಿದ್ದಾರೆ. ಅದು ಪ್ರಶಂಸನೀಯವಾಗಿದೆ.
ಇನ್ನು ಮೃತಪಟ್ಟವರು ಬಾಣಂತಿಯರು ಸೇವಿಸಿದ ಔಷಧಗಳ ಬಗ್ಗೆ ವೈದ್ಯಕೀಯ ತಜ್ಞರ ವಿಶೇಷ ಸಮಿತಿ ಪರೀಕ್ಷೆ ನಡೆಸುತ್ತಿದೆ. ಆಳವಾಗಿ ಪರೀಕ್ಷೆ ನಡೆಸುವುದು ಅಗತ್ಯವಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಮತ್ತೊಂದೆಡೆ ಸೇವಾ ಅಮಾನತಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೆಎಟಿಯ ಮಧ್ಯಂತರ ಆದೇಶವನ್ನು ಪ್ರಶ್ನಿಸಿದ ಅರ್ಜಿ ಇದಾಗಿದೆ. ಮುಖ್ಯ ಅರ್ಜಿ ವಿಲೇವಾರಿಗೆ ಬಾಕಿಯಿದ್ದು, ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗುತ್ತಿದ್ದು, ಕೆಎಟಿ ಅರ್ಜಿದಾರರ ಮುಖ್ಯ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 2024ರ ನವೆಂಬರ್ನಿಂದ ಡಿ.5ರ ನಡುವೆ ಐವರು ಬಾಣಂತಿಯರು ಸಾವನ್ನಪ್ಪಿದ್ದರು. ಕಳಪೆ ಗುಣಮಟ್ಟದ ಔಷಧ ಪೂರೈಸಿದ ಮೆ.ಪಶ್ಚಿಮ್ ಬಂಗಾಳ್ ಫಾರ್ಮಾಸ್ಯೂಟಿಕಲ್ ಲಿಮಿಟೆಡ್ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಫಲವಾದ ಆರೋಪದ ಮೇಲೆ ಡಾ.ಎಸ್. ಉಮೇಶ್ ಅವರನ್ನು ಸೇವೆಯಿಂದ ಅಮಾನತುಪಡಿಸಿ 2024ರ ಡಿ.2ರಂದು ಸರ್ಕಾರ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಉಮೇಶ್ ಕೆಎಟಿಗೆ ಅರ್ಜಿ ಸಲ್ಲಿಸಿ, ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಲು ಮಧ್ಯಂತರ ಮನವಿ ಮಾಡಿದ್ದರು. ಕೆಎಟಿಯು ಆ ಮನವಿಯನ್ನು 2024ರ ಡಿ.5ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಉಮೇಶ್ ಪರ ವಕೀಲರು, ಕಳಪೆ ಗುಣಮಟ್ಟದ ಔಷಧ ಪೂರೈಸಿದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ನಮ್ಮ ಕಕ್ಷಿದಾರರನ್ನು ಅಮಾನತುಪಡಿಸಲಾಗಿದೆ. ಆದರೆ, ಬಾಣಂತಿಯರ ಸಾವಿಗೆ ತಾನೇ ಕಾರಣ ಎಂಬುದಾಗಿ ಹೇಳುವ ಯಾವುದೇ ದಾಖಲೆ ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರೆತೆಯಿದ್ದರೂ ತಾನು ಕರ್ತವ್ಯ ನಿಭಾಯಿಯಿಸಿದ್ದು, ಎಲ್ಲಾ ಅಗತ್ಯ ಕ್ರಮ ಜರುಗಿಸಿದ್ದೇನೆ. ತನನ್ನು ಸೇವೆಯಿಂದ ಅಮಾನತುಪಡಿಸುವ ಅಗತ್ಯತೆಯೇ ಇರಲಿಲ್ಲ. ಆದ್ದರಿಂದ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಉದ್ಯೋಗ ಸ್ಥಳದಲ್ಲಿ ಜಾತಿ ತಾರತಮ್ಯ ಆರೋಪ : ಐಐಎಂ-ಬಿ ನಿರ್ದೇಶಕ ಮತ್ತಿತರರ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ