ನವದೆಹಲಿ:ವಿಪಕ್ಷಗಳ I.N.D.I.A ಕೂಟದಲ್ಲಿ ಮತ್ತೆ ಅಪಸ್ವರ ಕೇಳಿಬಂದಿದೆ. ಕಾಂಗ್ರೆಸ್ ನೇತೃತ್ವದಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ, ಮೈತ್ರಿಕೂಟದ ನಾಯಕತ್ವವನ್ನು ತಾನು ವಹಿಸಿಕೊಳ್ಳುವುದಾಗಿ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಇದಕ್ಕೆ ಮಿತ್ರಪಕ್ಷಗಳು ಮಿಶ್ರ ಬೆಂಬಲ ವ್ಯಕ್ತಪಡಿಸಿವೆ.
ಇಂಡಿಯಾ ಕೂಟವನ್ನು ರಚಿಸಿದ್ದು ನಾನೇ. ಅದನ್ನು ಸರಿಯಾದ ದಿಸೆಯಲ್ಲಿ ನಡೆಸಿಕೊಂಡು ಹೋಗಬೇಕಾದುದು ನೇತೃತ್ವ ವಹಿಸಿದವರ ಜವಾಬ್ದಾರಿ. ಮಿತ್ರಪಕ್ಷಗಳು ಬಯಸಿದಲ್ಲಿ ನಾನೇ ಕೂಟದ ಮುಂದಾಳತ್ವ ವಹಿಸಿಕೊಳ್ಳುವೆ ಎಂದು ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೂಟದಲ್ಲಿ ಕೆಲ ಮಿತ್ರಪಕ್ಷಗಳಲ್ಲಿ ಅಸಮಾಧಾನ ಇದೆ. ಅದನ್ನು ಹೊಣೆಗಾರಿಕೆ ಹೊತ್ತವರು ನಿಭಾಯಿಸಬೇಕು. ನಾನು ಬಂಗಾಳವನ್ನು ಬಿಡಲ್ಲ. ಕೂಟದ ನಾಯಕತ್ವ ನೀಡಿದಲ್ಲಿ ಇಲ್ಲಿಂದಲೇ ನಾನು ಅದನ್ನು ನಡೆಸಬಲ್ಲೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಸಾಧನೆ ಮಾಡಲು ಎಡವಿದ ಕಾಂಗ್ರೆಸ್ನ ಸಾಮರ್ಥ್ಯವನ್ನೂ ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಮಮತಾಗೆ ಸಾಮರ್ಥ್ಯ ಇದೆಯೇ?:ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ವಿಪಕ್ಷಗಳ ಕೂಟದ ನಾಯಕತ್ವವನ್ನು ತಾನು ವಹಿಸಿಕೊಳ್ಳುವುದಾಗಿ ಹೇಳಿಕೆ ನೀಡಿರುವ ಮಮತಾಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಯಾವ ಜವಾಬ್ದಾರಿ ನಿಭಾಯಿಸಿದ್ದಾರೆ. ಬಂಗಾಳದಲ್ಲಿ ಸತತ 3 ಬಾರಿ ಅಧಿಕಾರ ವಹಿಸಿಕೊಂಡರೂ ತಮ್ಮ ಪಕ್ಷವನ್ನು ಬೇರೆ ರಾಜ್ಯಗಳಲ್ಲಿ ವಿಸ್ತರಿಸಲು ಸಾಧ್ಯವಾಗಿಲ್ಲ. ಹೀಗಿದ್ದಾಗ, ರಾಷ್ಟ್ರೀಯ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ ಅವರಿಗೆ ಇದೆಯೇ ಎಂದು ಕಾಂಗ್ರೆಸ್ ನಾಯಕರು ಕೇಳಿದ್ದಾರೆ.