ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ದೊಡ್ಡ ಆಘಾತ ಎದುರಾಗಿದೆ. ಪಕ್ಷದ ಮೂವರು ಶಾಸಕರಾದ ನರೇಶ್ ಯಾದವ್, ರಾಜೇಶ್ ರಿಷಿ ಮತ್ತು ರೋಹಿತ್ ಕುಮಾರ್ ಮೆಹ್ರೌಲಿಯಾ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 5 ರಂದು ನಡೆಯಲಿರುವ ತೀವ್ರ ಪೈಪೋಟಿಯ ಚುನಾವಣೆಗೆ ಮುನ್ನ ಈ ರಾಜೀನಾಮೆಗಳು ಪಕ್ಷಕ್ಕೆ ಹೊಡೆತ ನೀಡಿವೆ.
ಭರವಸೆ ಈಡೇರಿಸುವ ಬದಲು ಸ್ವತಃ ಭ್ರಷ್ಟಾಚಾರದಲ್ಲಿ ಪಕ್ಷ- ಆರೋಪ:ಎಎಪಿ ಪ್ರಾಮಾಣಿಕ ರಾಜಕಾರಣವನ್ನು ತೊರೆದಿರುವುದರಿಂದ ತಾವು ಪಕ್ಷದಿಂದ ಹೊರ ಹೋಗುತ್ತಿರುವುದಾಗಿ ಮೆಹ್ರೌಲಿ ಶಾಸಕ ನರೇಶ್ ಯಾದವ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು ಪಕ್ಷವು ಸ್ವತಃ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿದೆ ಎಂದು ಆರೋಪಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮೆಹ್ರೌಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಯಾದವ್, ಪಕ್ಷದ ನಾಯಕತ್ವದ ಬಗ್ಗೆ ಭ್ರಮನಿರಸನ ವ್ಯಕ್ತಪಡಿಸಿದ್ದು, ಪಕ್ಷವು ಸಾರ್ವಜನಿಕರಿಗೆ ದ್ರೋಹ ಬಗೆದಿದೆ ಎಂದು ಹೇಳಿದ್ದಾರೆ.
ಅಸಮಾಧಾನ ಹೊರಹಾಕಿದ ಶಾಸಕರು:ಶುಕ್ರವಾರ ರಾಜೀನಾಮೆ ನೀಡಿದ ತ್ರಿಲೋಕ್ ಪುರಿಯ ಮತ್ತೊಬ್ಬ ಶಾಸಕ ರೋಹಿತ್ ಕುಮಾರ್ ಮೆಹ್ರೌಲಿಯಾ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ದೀರ್ಘಕಾಲದಿಂದ ತಾರತಮ್ಯ ಮತ್ತು ಶೋಷಣೆಗೊಳಗಾಗಿರುವ ದಲಿತ ಮತ್ತು ವಾಲ್ಮೀಕಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಭರವಸೆಯಿಂದ ಅಣ್ಣಾ ಹಜಾರೆ ಚಳವಳಿಯ ಸಮಯದಲ್ಲಿ ಎಎಪಿಗೆ ಸೇರಿದ್ದೆ ಎಂದು ಅವರು ಹೇಳಿದ್ದಾರೆ. ಎಎಪಿಗೆ ಹಲವಾರು ವರ್ಷಗಳ ನಿಷ್ಠಾವಂತನಾಗಿ ಕೆಲಸ ಮಾಡಿರುವ ಹೊರತಾಗಿಯೂ, ಪಕ್ಷವು ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಹೀಗಾಗಿ ಭಾರವಾದ ಹೃದಯದಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಪಕ್ಷ ಮೂಲ ಸಿದ್ಧಾಂತದಿಂದ ದೂರ ಸರಿದಿದೆ- ರಾಜೇಶ್ ರಿಷಿ:ಜನಕ್ ಪುರಿಯ ಶಾಸಕ ರಾಜೇಶ್ ರಿಷಿ ಕೂಡ ರಾಜೀನಾಮೆ ನೀಡಿದ್ದು, ಎಎಪಿ ತನ್ನ ಮೂಲ ಸಿದ್ಧಾಂತಗಳಿಂದ ದೂರ ಸರಿದಿದೆ ಎಂದು ಭ್ರಮನಿರಸನ ವ್ಯಕ್ತಪಡಿಸಿದ್ದಾರೆ. ಪಕ್ಷವು ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಪಾರದರ್ಶಕತೆಯ ತತ್ವಗಳಿಗೆ ದ್ರೋಹ ಬಗೆದಿದೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಮಾಜಿ ಬೆಂಬಲಿಗರಾದ ರಿಷಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದ್ಧತೆಯಿಂದ ಎಎಪಿ ದೂರ ಸರಿದಿದ್ದು, ಪಕ್ಷವು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿವೆ.
ಇದನ್ನೂ ಓದಿ : ರಾಷ್ಟ್ರಪತಿ ಬಗ್ಗೆ ಸೋನಿಯಾಗೆ ಅಪಾರ ಗೌರವವಿದೆ, ಮಾಧ್ಯಮಗಳು ಹೇಳಿಕೆ ತಿರುಚಿವೆ; ಪ್ರಿಯಾಂಕಾ - SONIA GANDHI STATEMENT