ನವದೆಹಲಿ:ನಾನು ಜೈಲಿನಿಂದ ಹೊರಗೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ. 75 ವರ್ಷಗಳಲ್ಲಿ ಯಾವುದೇ ಪಕ್ಷವು ಈ ಪರಿ ಪ್ರಮಾಣದಲ್ಲಿ ಕಿರುಕುಳ ನೀಡಿರುವ ಉದಾಹರಣೆ ಇರಲಿಕ್ಕಿಲ್ಲ. ಅಷ್ಟು ತಮಗೆ ಕಿರುಕುಳ ನೀಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿದ್ದ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಇಂದು (ಶನಿವಾರ) ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಎಲ್ಲ ಕಳ್ಳರೂ ಅವರ ಪಕ್ಷದಲ್ಲಿದ್ದಾರೆ. 2024ರ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್ ಸೇರಿದಂತೆ ಎಲ್ಲ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಎನ್‌ಡಿಎ ಮೈತ್ರಿ ತಮ್ಮ ಪ್ರಶ್ನಿಸುವ ಯಾವ ವಿರೋಧ ಪಕ್ಷದ ನಾಯಕರು ಇರಬಾರದೆಂದು ನಿರ್ಧರಿಸಿದಂತಿದೆ. ಜೈಲಿಗೆ ಕಳುಹಿಸಿ ಎಲ್ಲರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರು ನಡೆಯತ್ತಿದೆ. ಆಪ್ ಪಕ್ಷದ ಮಂತ್ರಿಗಳು, ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಮಂತ್ರಿಗಳು, ತೃಣಮೂಲ ಕಾಂಗ್ರೆಸ್ ಪಕ್ಷದ ಮಂತ್ರಿಗಳು ಸೇರಿದಂತೆ ಈಗಾಗಲೇ ಕೆಲವರನ್ನು ಜೈಲಿಗೆ ಕಳುಹಿಸಿದ್ದಾರೆ. ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಉದ್ಧವ್ ಠಾಕ್ರೆ (ಯುಬಿಟಿ ಮುಖ್ಯಸ್ಥ) ಸೇರಿ ಇತರ ವಿರೋಧ ಪಕ್ಷದ ನಾಯಕರು ಜೈಲಿನಲ್ಲಿರುತ್ತಾರೆ. ಅಂತಹದ್ದೊಂದು ವ್ಯವಸ್ಥಿತ ರಾಜಕೀಯ ದೇಶದಲ್ಲಿ ನಡೆಯುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.
75 ವರ್ಷಗಳಲ್ಲಿ ಬೇರೆ ಯಾವ ಪಕ್ಷವೂ ಈ ಮಟ್ಟಿಗೆ ಕಿರುಕುಳ ನೀಡಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಪ್ರಧಾನಿ ಹೇಳುತ್ತಿದ್ದಾರೆ. ಆದರೆ, ಎಲ್ಲ ಕಳ್ಳರು ತಮ್ಮ ಪಕ್ಷದಲ್ಲಿದ್ದಾರೆ ಎಂದು ಅವರು ಕಿಡಿಕಾರಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಅವರಿಂದ ಪಾಠ ಕಲಿಯಬೇಕಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೀವು ಬಯಸಿದರೆ ಕೇಜ್ರಿವಾಲ್ ಅವರಿಂದ ಕಲಿಯಿರಿ. ದೆಹಲಿಯಲ್ಲಿ ಸರ್ಕಾರ ರಚನೆಯಾದ ನಂತರ ನಾನು ನನ್ನ ಒಬ್ಬ ಸಚಿವರನ್ನು ವಜಾ ಮಾಡಿ ಜೈಲಿಗೆ ಕಳುಹಿಸಿದೆ. ಪಂಜಾಬ್‌ನಲ್ಲಿಯೂ ಪಬ್ಬ ಸಚಿವರನ್ನು ಜೈಲಿಗೆ ಕಳುಹಿಸಿದ್ದೇವೆ. ನೀವು ಏನು ಮಾಡಿದ್ದೀರಿ ಎಂದು ಕುಟುಕಿದರು.
ಪ್ರತಿಪಕ್ಷದ ನಾಯಕರನ್ನು ಮಿಷನ್ ರೀತಿ ಬಂಧಿಸಲಾಗುತ್ತಿದೆ. ಒಂದು ರಾಷ್ಟ್ರ, ಒಂದು ನಾಯಕ ನಿಮ್ಮ ನಿಲುವು. ಹಾಗಾಗಿ ಪ್ರಶ್ನೆ ಮಾಡಿದವರನ್ನು ಬಂಧಿಸುತ್ತಿದ್ದೀರಿ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟವಲ್ಲ. ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ಯಾರನ್ನಾದರೂ ಬಂಧಿಸುತ್ತೇವೆಂಬ ಸಂದೇಶ ನೀಡಿದ್ದೀರಿ ಎಂದು ಅವರು ಕಿಡಿ ಕಾರಿದರು.
ಪ್ರಧಾನಿ ಮೋದಿ ತನಗಾಗಿ ಮತ ಕೇಳುತ್ತಿಲ್ಲ, ಗೃಹ ಸಚಿವ ಅಮಿತ್ ಶಾಗೆ ಮತ ಕೇಳುತ್ತಿದ್ದಾರೆ. ಬಿಜೆಪಿ ಪಕ್ಷವೇ ಮಾಡಿಕೊಂಡಿರುವ ಅಲಿಖಿತ ನಿಯಮದಂತೆ ಸೆ. 17ಕ್ಕೆ 75ನೇ ವರ್ಷಕ್ಕೆ ಕಾಲಿಡಲಿರುವ ಪ್ರಧಾನಿ ಮೊದಿ ರಾಜಕೀಯದಿಂದ ನಿವೃತ್ತಿ ಹೊಂದಲಿದ್ದಾರೆ. ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಮತ್ತು ಯಶವಂತ್ ಸಿನ್ಹಾ ಸಾಲಿಗೆ ಮೋದಿ ಕೂಡ ಸೇರಿಕೊಳ್ಳಲಿದ್ದಾರೆ. ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಎಂಎಲ್ ಖಟ್ಟರ್ ಮತ್ತು ರಮಣ್ ಸಿಂಗ್ ಸೇರಿದಂತೆ ಕೆಲ ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಮುಗಿದಿದೆ. ಈ ಚುನಾವಣೆ ಬಳಿಕ ಯೋಗಿ ಆದಿತ್ಯನಾಥ್ ಕೂಡ ಈ ಪಟ್ಟಿಗೆ ಸೇರಬಹುದು ಎಂದ ಕೇಜ್ರಿವಾಲ್, ದೇಶದಲ್ಲಿನ ಸರ್ವಾಧಿಕಾರದಿಂದ ನಾವೆಲ್ಲರೂ ಹೊರಬರಬೇಕಿದೆ. ನಾನು ಅದರ ವಿರುದ್ಧ ಹೋರಾಡುತ್ತಿದ್ದೇನೆ. ಅದಕ್ಕೆ ದೇಶದ ಜನ ಕೈಜೋಡಿಸುವಂತೆ ಕೇಳಿಕೊಂಡರು.
ಇದನ್ನೂ ಓದಿ:ಬಿಜೆಪಿಯೊಂದಿಗೆ ಒಡಿಶಾದ ಜನರು ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ: ಪ್ರಧಾನಿ ಮೋದಿ - Prime Minister Narendra Modi