ಕರ್ನಾಟಕ

karnataka

ETV Bharat / bharat

'ರಾಮಾಯಣ' ನಾಟಕದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ಮಾಂಸ ಭಕ್ಷಿಸಿದ ರಾಕ್ಷಸ ಪಾತ್ರಧಾರಿ!

ರಾಮಾಯಣ ಕಥಾಹಂದರದ ನಾಟಕದ ವೇಳೆ ರಾಕ್ಷಸ ಪಾತ್ರಧಾರಿಯೊಬ್ಬ ವೇದಿಕೆ ಮೇಲೆ ಜೀವಂತ ಹಂದಿಯನ್ನು ಕೊಂದು, ಅದರ ಮಾಂಸ ತಿಂದ ಭಯಾನಕ ಘಟನೆ ಒಡಿಶಾದಲ್ಲಿ ನಡೆದಿದೆ.

ಜೀವಂತ ಹಂದಿ ಕೊಂದ ಆರೋಪಿ, ನಿರ್ದೇಶಕನ ಬಂಧನ
ಜೀವಂತ ಹಂದಿ ಕೊಂದ ಆರೋಪಿ, ನಿರ್ದೇಶಕನ ಬಂಧನ (ETV Bharat Odisha)

By ETV Bharat Karnataka Team

Published : Dec 3, 2024, 6:26 PM IST

Updated : Dec 3, 2024, 6:56 PM IST

ಗಂಜಾಮ್​(ಒಡಿಶಾ):ರಾಮಾಯಣ ಆದರ್ಶ ಮಹಾಕಾವ್ಯ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನೀತಿ ಪಾಠಗಳು ಅದರಲ್ಲಿವೆ. ಇಂತಹ ಮಹಾನ್​ ತಿರುಳಿನ ನಾಟಕದ ವೇಳೆ ಪಾತ್ರಧಾರಿಯೊಬ್ಬ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಹಸಿ ಮಾಂಸವನ್ನು ಭಕ್ಷಿಸಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್​ ಜಿಲ್ಲೆಯಲ್ಲಿ ನಡೆದಿದೆ.

ಗಂಜಾಂ ಜಿಲ್ಲೆಯ ರಾಲಾಬ್ ಗ್ರಾಮದಲ್ಲಿ ನವೆಂಬರ್​ 25ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ‘ರಾಮಾಯಣ ನಾಟಕ’ದ ವೇದಿಕೆಯಲ್ಲಿ ಜೀವಂತ ಹಂದಿಯನ್ನು ಕೊಂದು ತಿಂದಿದ್ದಲ್ಲದೇ, ಹಾವಿಗೆ ಕಿರುಕುಳ ನೀಡಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಪ್ರಾಣಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಘಟನೆಯ ವಿವರ:ರಾಲಾಬ್ ಗ್ರಾಮದಲ್ಲಿ ರಾಮಾಯಣ ಕಥಾಹಂದರದ ನಾಟಕ ನಡೆಯುತ್ತಿತ್ತು. ಈ ವೇಳೆ ರಾಕ್ಷಸ ಪಾತ್ರಧಾರಿಯೊಬ್ಬ ಕಥಾವಸ್ತುವಾಗಿ ತಂದಿದ್ದ ಜೀವಂತ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಅದರ ಮಾಂಸವನ್ನು ಭಕ್ಷಿಸಿದ್ದಾನೆ. ಇದನ್ನು ಕತೆಯ ಗಾಢತೆ, ಪ್ರಭಾವ ಹೆಚ್ಚಿಸಲು ಮಾಡಲಾಗಿತ್ತು. ಆದರೆ, ರಾಕ್ಷಸ ಪಾತ್ರಧಾರಿಯ ಈ 'ರಾಕ್ಷಸೀತನ' ವೀಕ್ಷಕರಲ್ಲಿ ಗಾಬರಿ ಹುಟ್ಟಿಸಿದೆ.

ಬಳಿಕ ಕಲಾವಿದ ಹಾವಿನ ಜೊತೆ ಆಟವಾಡಿದ್ದಾನೆ. ಈ ಭಯಾನಕ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಾಣಿಪ್ರಿಯರು ಮತ್ತು ಪ್ರಾಣಿ ದಯಾ ಸಂಘ ನಾಟಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಲಾವಿದ, ನಿರ್ದೇಶಕನ ಬಂಧನ:ಜೀವಂತ ಹಂದಿಯನ್ನು ಕೊಂದು ತಿಂದು, ವೇದಿಕೆಯ ಮೇಲೆ ವಿಷಕಾರಿ ಹಾವಿಗೆ ನೋವುಂಟು ಮಾಡಿದ ದೃಶ್ಯ ಹೊರಬಿದ್ದ ಬಳಿಕ ಇದರ ವಿರುದ್ಧ ಪ್ರಾಣಿ ಹಿಂಸೆ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘನೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಕ್ಷಸ ಪಾತ್ರಧಾರಿ ಮತ್ತು ನಿರ್ದೇಶಕನನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸರು ಮತ್ತು ಅರಣ್ಯ ಇಲಾಖೆ ಜಂಟಿ ತನಿಖೆ ಆರಂಭಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬರ್ಹಾಂಪುರದ ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಕುಮಾರ್, "ನಾಟಕದ ವೇಳೆ ಹಂದಿಯನ್ನು ಕೊಂದು, ಹಾವಿಗೆ ನೋವುಂಟು ಮಾಡಲಾಗಿದೆ. ಪ್ರಾಣಿ ಹಿಂಸೆ ಮತ್ತು ವನ್ಯಜೀವಿ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ" ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ:ಮಧ್ಯ ಪ್ರದೇಶ: ರತಪಾನಿ ಅರಣ್ಯ ಪ್ರದೇಶ ದೇಶದ 57ನೇ ಹುಲಿ ಸಂರಕ್ಷಣಾ ವಲಯವಾಗಿ ಘೋಷಣೆ

Last Updated : Dec 3, 2024, 6:56 PM IST

ABOUT THE AUTHOR

...view details