ತೂತುಕುಡಿ(ತಮಿಳುನಾಡು):"ಹುಟ್ಟಿದ ಮೇಲೆ ಏನಾದರೂ ಸಾಧಿಸಿಯೇ ಸಾಯಬೇಕು. ಹೆಣ್ಣಾಗಿ ಹುಟ್ಟಿ, ದೊಡ್ಡವಳಾಗುತ್ತಿದ್ದಂತೆ ಮದುವೆ, ಎರಡು ವರ್ಷಕ್ಕೆ ಕಂಕುಳಲ್ಲೊಂದು ಮಗು ಎತ್ತುಕೊಳ್ಳೋದೇ ಸಾಧನೆ ಅಲ್ಲ" ಎನ್ನುವ ಛಲಗಾತಿ ಈ ಯುವತಿ.
ತೂತುಕುಡಿ ಜಿಲ್ಲೆಯಲ್ಲಿ ಪೆರಿಯಾದಲ್ ಎಂಬ ಮೀನುಗಾರರ ಗ್ರಾಮವಿದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು, ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿವೆ. ಸಾಮಾನ್ಯವಾಗಿ ಗಂಡಸರು ದೋಣಿ ಹಿಡಿದು ಸಮುದ್ರಕ್ಕಿಳಿದರೆ, ಮಹಿಳೆಯರು ಮೀನು ಮಾರುವ ಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತಾರೆ. ಆದರೆ, ಈ ಎಲ್ಲಾ ಅಡೆತಡೆಗಳನ್ನು ಮೀರಿ, ದೋಣಿಯಲ್ಲಿ ಸಮುದ್ದಕ್ಕಿಳಿದು ಮೀನುಗಳಿಗೆ ಬಲೆ ಬೀಸಿದ ಧೀರೆಯ ಹೆಸರು ಸುಭಿಕ್ಷಾ. ಮಹಿಳೆಯರು ಕೂಡ, ಕುಟುಂಬ, ಲಿಂಗ, ಕಟ್ಟುಪಾಡುಗಳು ಎನ್ನುವಂತಹ ಅಡೆತಡೆಗಳನ್ನು ಮೀರಿ ಸಾಧನೆ ಮಾಡಬೇಕು ಎನ್ನುವುದು ಇವರ ಆಸೆ.
ಓದಿದ್ದು ಇಂಗ್ಲೀಷ್ ಸಾಹಿತ್ಯದಲ್ಲಿ ಬಿಎ, ಆದರೆ ಇಳಿದಿದ್ದು ಮಾತ್ರ ಸಮುದ್ರಕ್ಕೆ. ತನ್ನದೇ ಮನೆಯವರು, ನೆರೆಹೊರೆಯವರು, ಮಹಿಳೆಯರು, ಸಮಾಜ ಹೀಗೆ ಎಲ್ಲರ ಗೇಲಿ ಮಾತುಗಳನ್ನು ದಾಟಿ ಸುಭಿಕ್ಷಾ ಇಂದು ತಮಿಳುನಾಡಿನಲ್ಲೇ ಮೊದಲ ಮಹಿಳಾ ಸಮುದ್ರ ವ್ಲಾಗರ್ (ಸೀ ವ್ಲಾಗರ್) ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಸುಭಿಕ್ಷಾ ಈಗ ಉದ್ಯಮಿಯೂ ಹೌದು. ಸುಭಿಕ್ಷಾ ಮಾಡುವ ಮೀನಿನ ಉಪ್ಪಿನಾಯಿ ಈಗ ತಮಿಳುನಾಡು ಮಾತ್ರವಲ್ಲದೆ, ರಾಜ್ಯಗಳನ್ನು ದಾಟಿ ದೆಹಲಿವರೆಗೂ ಪ್ರಸಿದ್ಧಿ ಪಡೆದಿದೆ.
ನಕ್ಕವರು, ಹಾಸ್ಯ ಮಾಡಿದವರ ಮುಂದೆ ತಲೆ ಎತ್ತಿ ನಿಂತ ಸುಭಿಕ್ಷಾ:ಇವರ ಸಾಧನೆಯ ಬಗ್ಗೆ ಅವರದ್ದೇ ಮಾತುಗಳಲ್ಲಿ ಕೇಳುವುದಾದರೆ, "ಕಾಲೇಜು ಮುಗಿಸಿ, ಏನಾದರೂ ಮಾಡಬೇಕು ಎಂದು ಯೋಚಿಸಿದಾಗ, ಸೀ ವ್ಲಾಗಿಂಗ್ ಮಾಡುವ ಎನಿಸಿತು. ತಮಿಳುನಾಡಿನಲ್ಲಿಯೇ ಮೊದಲ ಮಹಿಳಾ ಸೀ ವ್ಲಾಗರ್ ನಾನು ಎನ್ನುವ ಹೆಮ್ಮೆ ನನಗಿದೆ. ಆದರೆ ಅದರ ಹಿಂದೆ ಸಾಕಷ್ಟು ನೋವುಗಳಿವೆ. ಆರಂಭದಲ್ಲಿ ಅಪ್ಪನ ಜೊತೆ ಸಮುದ್ರಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದಾಗ, ಬೈದ್ರು, ನಕ್ಕರು, ಹಾಸ್ಯ ಮಾಡಿದ್ರು. ಆದರೆ ಅದೆಲ್ಲಕ್ಕೆ ನಾನು ತಲೆಕೆಡಿಸಿಕೊಳ್ಳಲೇ ಇಲ್ಲ. ನಾನು ಬರ್ತೇನೆ ಎನ್ನುವಾಗ ಸಮಾಧಾನ ಮಾಡಿ ಬಿಡುತ್ತಿದ್ದರು. ನಾನು ಅಷ್ಟು ಬೇಗ ಬೆಳಗ್ಗೆ ಎದ್ದೇಳಲ್ಲ ಎಂದು ಹಾಗೆ ಹೇಳುತ್ತಿದ್ದರು. ಆದರೆ, ಅವರು ಎದ್ದೇಳುವಾಗ ನಾನು ಕೂಡ ಎದ್ದೇಳ್ತಿದ್ದೆ. ಆದರೆ ಅವರು ನನ್ನನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಹೀಗೆ, ವಾರ, ತಿಂಗಳ ಕಾಲ ಅವರು ಎದ್ದೇಳುವಾಗ, ನಾನೂ ಎದ್ದು ಕೂತು, ಬರುವುದಾಗಿ ಹೇಳುತ್ತಿದ್ದೆ. ತುಂಬಾ ಹಠ ಮಾಡಿದಾಗ, ಬೇರೆ ದಾರಿಯಿಲ್ಲದೇ ಒಂದು ದಿನ ಕರೆದುಕೊಂಡು ಹೋಗಲು ನಿರ್ಧರಿಸಿದರು. ಒಂದೇ ದಿನಕ್ಕೆ ವಾಂತಿ ಮಾಡುತ್ತೇನೆ, ಸುಸ್ತಾಗುತ್ತೇನೆ ಅಂದುಕೊಂಡ್ರು. ಆದರೆ ಅವರ ಯೋಚನೆಯನ್ನೇ ನಾನು ಸುಳ್ಳು ಮಾಡಿದ್ದೆ. ನಂತರದ ದಿನಗಳಲ್ಲಿ ಪ್ರತಿದಿನ ಕರೆದುಕೊಂಡು ಹೋಗಲು ಪ್ರಾರಂಭಿಸಿದರು. 1 ವರ್ಷದಿಂದ ಕಡಲಿಗೆ ಹೋಗುತ್ತಿದ್ದೇನೆ. ಹೋಗಿ ವಿಡಿಯೋ ಮಾಡಲು ಪ್ರಾರಂಭಿಸಿದೆ. ಹೀಗೆ ನನ್ನ ಸಮುದ್ರದಲ್ಲಿ ಸಾಧನೆಯ ಈಜಾಟ ಪ್ರಾರಂಭವಾಯಿತು." ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ಸುಭಿಕ್ಷಾ.
ತಮಿಳುನಾಡಿಗೆ ಹೆಸರು ಗೊತ್ತಾಗುವಂಥಾ ಸಾಧನೆ ಮಾಡಿದ ಧೀರೆ:"ಹೀಗಿದ್ದರೂ, ನನ್ನ ಕುಟುಂಬದವರು, ನೆರೆಹೊರೆಯವರು, ತುಂಬಾ ಜನರು ನನ್ನ ವಿರುದ್ಧವಾಗಿಯೇ ಇದ್ದರು. ಹೆಣ್ಣಲ್ವ ನೀನು, ಯಾಕೆ ಹೀಗೆಲ್ಲಾ ಹೋಗ್ತೀದೀಯಾ? ಮದುವೆ ಮಾಡಿಕೊಳ್ಳುವುದಲ್ಲವಾ? ಅಂತೆಲ್ಲಾ ಕೇಳ್ತಿದ್ರು. ಆದರೆ ನಾನು ಅದ್ಯಾವುದನ್ನೂ ತಲೆಗೆ ಹಚ್ಚಿಕೊಂಡಿಲ್ಲ. ಆದರೆ ನನಗೆ ಸುಮ್ಮನೆ ಹುಟ್ಟುತ್ತೇವೆ, ಮದುವೆ ಆಗುತ್ತೇವೆ, ಮಕ್ಕಳನ್ನು ಹೆರುತ್ತೇವೆ ಅಂತಿರಬಾರದು. ಹುಟ್ಟಿದ್ದೇವಾ, ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ನನ್ನ ಹೆಸರು ಈ ಊರು, ತಮಿಳುನಾಡಿಗೆ ತಿಳಿಯುವಂತಾಗಲು ಏನಾದರೂ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಏನು ಮಾಡಬೇಕು ಅದನ್ನು ನಿರಂತರವಾಗಿ ಮಾಡುತ್ತಿದ್ದೇನೆ."