ನವದೆಹಲಿ: ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದಲಿತೇತರ ಮಹಿಳೆ ಮತ್ತು ದಲಿತ ಪುರುಷನ ನಡುವಿನ ಮದುವೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಕಳೆದ ಆರು ವರ್ಷಗಳಿಂದ ತಾಯಿಯೊಂದಿಗೆ ಇರುವ ಅಪ್ರಾಪ್ತ ಮಕ್ಕಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವಂತೆ ಪತಿಗೆ ಗುರುವಾರ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ಜೂಹಿ ಪೋರಿಯಾ ನೀ ಜವಾಲ್ಕರ್ ಮತ್ತು ಪ್ರದೀಪ್ ಪೋರಿಯಾ ದಂಪತಿಗೆ ವಿಚ್ಚೇದನ ಮಂಜೂರು ಮಾಡಿದ್ದು ದಲಿತೇತರ ಮಹಿಳೆಯೊಬ್ಬಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಾತ್ರಕ್ಕೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಲು ಸಾಧ್ಯವಿಲ್ಲವಾದರೂ ಪರಿಶಿಷ್ಟ ಜಾತಿಯ ಪುರುಷನಿಗೆ ಜನಿಸಿದ ಅವರ ಮಕ್ಕಳು ಎಸ್ಸಿ ಟ್ಯಾಗ್ಗೆ ಅರ್ಹರಾಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟಿದೆ.
ಸುಪ್ರೀಂ ಕೋರ್ಟ್ ಅನೇಕ ತೀರ್ಪುಗಳಲ್ಲಿ ಈ ತತ್ವವನ್ನು ಪುನರುಚ್ಚರಿಸಿದೆ ಮತ್ತು 2018 ರಲ್ಲಿ ನೀಡಲಾದ ತೀರ್ಪೊಂದರಲ್ಲಿ, "ಜಾತಿಯನ್ನು ಹುಟ್ಟಿನಿಂದ ನಿರ್ಧರಿಸಲಾಗುತ್ತದೆ ಮತ್ತು ಪರಿಶಿಷ್ಟ ಜಾತಿಯ (ಸಮುದಾಯ) ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಜಾತಿಯನ್ನು ಬದಲಾಯಿಸಲಾಗುವುದಿಲ್ಲ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಮಹಿಳೆಯೊಬ್ಬಳ ಪತಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕಾರಣಕ್ಕೇ ಆಕೆಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ." ಎಂದು ಹೇಳಿತ್ತು.
ಪ್ರಸ್ತುತ ಪ್ರಕರಣದಲ್ಲಿ, ಹನ್ನೊಂದು ವರ್ಷದ ಮಗ ಮತ್ತು ಆರು ವರ್ಷದ ಮಗಳು ಕಳೆದ ಆರು ವರ್ಷಗಳಿಂದ ರಾಯ್ಪುರದ ತನ್ನ ಹೆತ್ತವರ ಮನೆಯಲ್ಲಿ ದಲಿತೇತರ ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ. ಸದ್ಯ ದಂಪತಿಗೆ ಸುಪ್ರೀಂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದ್ದು, ಮಕ್ಕಳು ದಲಿತೇತರ ಕುಟುಂಬದಲ್ಲಿಯೇ ಇರಲಿದ್ದಾರೆ. ಆದಾಗ್ಯೂ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಉದ್ಯೋಗದ ಉದ್ದೇಶಕ್ಕಾಗಿ ಅವರನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದೇ ಪರಿಗಣಿಸಲಾಗುತ್ತದೆ.