ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್, ಶಿವ ಖೋರಿ ದೇವಸ್ಥಾನದಿಂದ ಕತ್ರಾ ಮಾರ್ಗವಾಗಿ ತೆರಳುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ರಿಯಾಸಿ ಜಿಲ್ಲೆಯ ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಬಳಿ ಭಾನುವಾರ ಸಂಜೆ 6.15 ರ ಸುಮಾರಿಗೆ ಉಗ್ರರು ದಾಳಿ ಮಾಡಿದ್ದಾರೆ.
"ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ" ಎಂದು ರಿಯಾಸಿ ಎಸ್ಎಸ್ಪಿ ಮೋಹಿತಾ ಶರ್ಮಾ ತಿಳಿಸಿದ್ದಾರೆ. ಘಟನೆ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್, ಸೇನೆ ಮತ್ತು ಅರೆಸೇನಾ ಪಡೆಗಳು ಧಾವಿಸಿವೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು, "ರಿಯಾಸಿ ಜಿಲ್ಲೆಯ ಪೌನಿ ಪ್ರದೇಶದಲ್ಲಿ ಸಂಜೆ 6.10ರ ಸುಮಾರಿಗೆ ಶಿವ ಖೋರಿಯಿಂದ ಕತ್ರಾಕ್ಕೆ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ" ಎಂದು ಹೇಳಿದ್ದಾರೆ. ಸ್ಥಳೀಯ ಗ್ರಾಮಸ್ಥರ ಸಹಾಯದಿಂದ, ಪೊಲೀಸರು ರಾತ್ರಿ 8.10 ರ ವೇಳೆಗೆ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ.
ರಿಯಾಸಿ ಜಿಲ್ಲಾಧಿಕಾರಿ ವಿಶೇಷ್ ಪಾಲ್ ಮಹಾಜನ್ ಕೂಡ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಇನ್ನು ಭಯೋತ್ಪಾದಕರನ್ನು ಹೆಡೆಮುರಿಕಟ್ಟಲು ರಿಯಾಸಿ ಮತ್ತು ನೆರೆಯ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕೇವಲ ಒಂದು ಗಂಟೆ ಮೊದಲು ಈ ದಾಳಿ ನಡೆದಿದೆ. ನೆರೆಯ ಪ್ರದೇಶಗಳಾದ ರಾಜೌರಿ ಮತ್ತು ಪೂಂಚ್ಗೆ ಹೋಲಿಸಿದರೆ ರಿಯಾಸಿ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಇದ್ದವು. ಆದರೆ ಈಗ ಈ ಪ್ರದೇಶದಲ್ಲೂ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವುದು ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ 70ಕ್ಕೂ ಹೆಚ್ಚು ವಿದೇಶಿ ಉಗ್ರರು ಸಕ್ರಿಯ: ಸೇನೆ - foreign terrorists in Kashmir