ಅಮೃತಸರ(ಪಂಜಾಬ್): ಅಮೆರಿಕದಿಂದ ಗಡೀಪಾರಾದ ಅಕ್ರಮ ವಲಸಿಗರನ್ನು ಹೊತ್ತ ಮತ್ತೊಂದು ಸೇನಾ ವಿಮಾನ ಕಳೆದ ರಾತ್ರಿ ಅಮೃತಸರದ ಶ್ರೀ ಗುರುರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. US ಏರ್‌ಫೋರ್ಸ್ C-17A ಗ್ಲೋಬ್ ಮಾಸ್ಟರ್ ವಿಮಾನದಲ್ಲಿ 112 ಭಾರತೀಯರಿದ್ದರು.
ಗಡೀಪಾರಾದವರಲ್ಲಿ ಹರಿಯಾಣದ 44, ಪಂಜಾಬ್‌ನ 31, ಗುಜರಾತ್‌ನ 33, ಉತ್ತರ ಪ್ರದೇಶದ ಇಬ್ಬರು, ಹಿಮಾಚಲ ಪ್ರದೇಶದಿಂದ ಓರ್ವರು ಮತ್ತು ಉತ್ತರಾಖಂಡದ ಓರ್ವ ವ್ಯಕ್ತಿ ಇದ್ದಾರೆ. ಇದುವರೆಗೆ ಒಟ್ಟು 335 ಭಾರತೀಯರನ್ನು ಗಡೀಪಾರು ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಅಮೃತಸರ ಡೆಪ್ಯುಟಿ ಕಮಿಷನರ್ ಸಾಕ್ಷಿ ಸಾಹ್ನಿ, "ಗಡೀಪಾರು ಮಾಡಲಾದ ಭಾರತೀಯರು ಕ್ಷೇಮವಾಗಿದ್ದಾರೆ. ಆಹಾರ ನೀಡಿದ ಬಳಿಕ ಅವರ ಮನೆಗಳಿಗೆ ಕಳುಹಿಸಲಾಗುವುದು. ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪೈಕಿ ಮಹಿಳೆಯರು ಮತ್ತು ಕೆಲವು ಮಕ್ಕಳಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ಜನರನ್ನು ರಸ್ತೆ ಮೂಲಕ ಕಳುಹಿಸಲಾಗುವುದು. ಉಳಿದವರನ್ನು ದೇಶೀಯ ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಗುವುದು" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 'ಕೈಕೋಳ, ಸಂಕೋಲೆ ಹಾಕಿದ್ದರು': ಅಮೆರಿಕದಿಂದ ಗಡೀಪಾರಾದ 2ನೇ ತಂಡದಲ್ಲಿದ್ದ ಭಾರತೀಯನ ದೂರು