ಬಾರಾಮುಲ್ಲಾ(ಜಮ್ಮು-ಕಾಶ್ಮೀರ):ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಮತ್ತೊಂದು ದಾಳಿ ನಡೆದಿದೆ. ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಸಮೀಪವಿರುವ ಬಾರಾಮುಲ್ಲಾದ ಗುಲ್ಮಾರ್ಗ್ ಪ್ರದೇಶದ ಬಳಿ ಗುರುವಾರ ಉಗ್ರರು ಸೈನಿಕರ ಮೇಲೆ ದಾಳಿ ನಡೆಸಿದ್ದರಿಂದ ಇಬ್ಬರು ಸೇನಾ ಹಮಾಲಿಗಳು ಸಾವನ್ನಪ್ಪಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಸೇನಾ ವಾಹನವು 18 ರಾಷ್ಟ್ರೀಯ ರೈಫಲ್ಸ್ (RR)ಗೆ ಸೇರಿದ್ದಾಗಿದೆ. ಯೋಧರಿದ್ದ ವಾಹನವು ಬೂತಪಾತ್ರದ ಮಾರ್ಗವಾಗಿ ಹೋಗುತ್ತಿದ್ದಾಗ ದಾಳಿ ನಡೆದಿದೆ. ಈ ಪ್ರದೇಶವು ಗಡಿಗೆ ಸಮೀಪವಿದ್ದು, ಹೆಚ್ಚಿನ ಸೇನಾ ಭದ್ರತೆ ಇರುವ ಜಾಗವಾಗಿದೆ. ಆದಾಗ್ಯೂ, ಭಯೋತ್ಪಾದಕರು ಕಣ್ಣುತಪ್ಪಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಉಗ್ರರ ಗುಂಡಿನ ದಾಳಿಗೆ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದ್ದಾರೆ. ದಾಳಿಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಬಾರಾಮುಲ್ಲಾ ಪೊಲೀಸರು ಮಾಹಿತಿ ನೀಡಿದರು.
ಕಾರ್ಮಿಕರ ಹತ್ಯೆ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕಾರ್ಮಿಕನ ಮೇಲೆ ನಿಗೂಢ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆದಿದೆ. ಸದ್ಯ ಕಾರ್ಮಿಕ ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.