ಉಧಂಪುರ (ಜಮ್ಮು ಮತ್ತು ಕಾಶ್ಮೀರ್): ಪೊಲೀಸರು ಮತ್ತು ಭದ್ರತಾ ಪಡೆ ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಮೂಲಕ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿವೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಘಟನಾ ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ರೈಫಲ್ಸ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಿಯಾಸಿಯ ಮಹೋರ್ ಉಪವಿಭಾಗದ ಲಾಂಚಾ ಪ್ರದೇಶದಲ್ಲಿದ್ದ ಭಯೋತ್ಪಾದಕರ ಅಡಗುತಾಣವನ್ನು ಪತ್ತೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ತಂಡವು ಗೌಪ್ಯ ಮಾಹಿತಿ ಪಡೆದ ನಂತರ ಕ್ರಮ ಕೈಗೊಂಡು ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಟಿಫಿನ್ ಬಾಕ್ಸ್ನಲ್ಲಿ ಹಾಕಲಾಗಿದ್ದ ಐಇಡಿ ಹಾಗೂ ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧದ ವೇಳೆ, ಐಇಡಿ ಮತ್ತು ಎರಡು ಪಿಸ್ತೂಲ್‌ಗಳಲ್ಲದೆ, ಮೂರು ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಗನ್‌ಪೌಡರ್, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು 24 ಬುಲೆಟ್‌ಗಳ ಜೊತೆಗೆ ಎಕೆ ಅಸಾಲ್ಟ್ ರೈಫಲ್‌ನ 40 ಬುಲೆಟ್‌ಗಳು, ಎಂಟು ಬ್ಯಾಟರಿಗಳು, 40 ಮೀಟರ್ ವಿದ್ಯುತ್ ತಂತಿ, ಐದು ಮೀಟರ್ ಪ್ಲಾಸ್ಟಿಕ್ ಹಗ್ಗ ಸಹ ಪತ್ತೆಯಾಗಿದೆ.