ಶ್ರೀನಗರ, ಜಮ್ಮು- ಕಾಶ್ಮೀರ: ರಿಯಾಸಿ ಪ್ರದೇಶದಲ್ಲಿ ಮಂಗಳವಾರವೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆಸಿ, ಒಂಬತ್ತು ಮಂದಿಯನ್ನು ಹತ್ಯೆ ಮಾಡಿ, 42 ಮಂದಿಯನ್ನು ಗಾಯಗೊಳಿಸಿದ ಭಯೋತ್ಪಾದಕರನ್ನು ಬಂಧಿಸಲು ಪೊಲೀಸರು ಸೋಮವಾರ 11 ತಂಡಗಳನ್ನು ರಚಿಸಿದ್ದಾರೆ.
ಭಯೋತ್ಪಾದಕರನ್ನು ಅರೆಸ್ಟ್ ಮಾಡಲು ಬೃಹತ್ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಾಜ್ಯ ತನಿಖಾ ಸಂಸ್ಥೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ತನಿಖೆಗೆ ಕೈಜೋಡಿಸಿದ್ದು, ತೇರ್ಯತ್‌ನಲ್ಲಿ ನಡೆದ ದಾಳಿಯ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದೆ. ಪೊಲೀಸರು ಕೆಲ ಸ್ಥಳೀಯರನ್ನು ವಿಚಾರಣೆಗೊಳಪಡಿಸಿದ್ದಾರೆ. 53 ಪ್ರಯಾಣಿಕರಿದ್ದ ಬಸ್ ರಿಯಾಸಿಯ ಶಿವ ಖೋರಿ ದೇವಸ್ಥಾನದಿಂದ ಕತ್ರಾಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದಾಗ, ಭಾನುವಾರ ಸಂಜೆ ರಿಯಾಸಿಯ ಟೆರ್ಯಾತ್ ಗ್ರಾಮದಲ್ಲಿ ಸಂಜೆ 6.10ರ ಸುಮಾರಿಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ, ಬಸ್ ಚಾಲಕ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿತ್ತು.
''ನಮ್ಮ ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರತ್ಯಕ್ಷದರ್ಶಿಗಳು ಮತ್ತು ಘಟನಾ ಸ್ಥಳದಿಂದ ಸಂಗ್ರಹಿಸಿದ ಸಾಕ್ಷಿಗಳ ಪ್ರಕಾರ, ಬಸ್ ಮೇಲಿನ ಈ ದಾಳಿಯಲ್ಲಿ ಬಹುಶಃ ಎರಡರಿಂದ ಮೂರು ಭಯೋತ್ಪಾದಕರು ಭಾಗಿಯಾಗಿರಬಹುದು. ಪೊಲೀಸ್ ಇಲಾಖೆಯಿಂದ ತನಿಖೆ ಮತ್ತು ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ನಾವು ಸಾಕಷ್ಟು ಜನರನ್ನು ವಿಚಾರಣೆಗೆ ಕರೆದಿದ್ದೇವೆ. ಇಲ್ಲಿಯವರೆಗೆ ನಡೆದ ತನಿಖೆಯ ಪ್ರಕಾರ, ಈ ಕೃತ್ಯದಲ್ಲಿ ಲಷ್ಕರ್-ಎ-ತೊಯ್ಬಾದ ಕೈವಾಡವಿರುವುದು ಪತ್ತೆಯಾಗಿದೆ'' ಎಂದು ಉಧಮ್‌ಪುರ ವ್ಯಾಪ್ತಿಯ ಪೊಲೀಸ್ ಉಪ ಮಹಾನಿರೀಕ್ಷಕ ರಯೀಸ್ ಭಟ್ ಹೇಳಿದರು.
ಇದನ್ನೂ ಓದಿ:ರಾಯ್ಬರೇಲಿ ಮತದಾರರಿಗೆ ಇಂದು ಧನ್ಯವಾದ ಅರ್ಪಿಸಲಿದ್ದಾರೆ ಸೋನಿಯಾ, ರಾಹುಲ್, ಪ್ರಿಯಾಂಕಾ - Sonia Rahul in Raebareli today