ಚೆನ್ನೈ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ತಮಿಳುನಾಡಿನ ಶ್ರೀ ಪೆರಂಬುದೂರ್ ಜಿಲ್ಲೆಯ ಸುಂಗುವರಚತ್ರಮ್ನ ಸ್ಯಾಮ್ಸಂಗ್ ಇಂಡಿಯಾ ಘಟಕದ ನೌಕರರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಸಿಪಿಐ(ಎಂ) ಬೆಂಬಲಿತ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ನ ನಾಯಕನನ್ನು ಪೊಲೀಸರು ಇಂದು ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ.
ಸ್ಯಾಮ್ಸಂಗ್ ಘಟಕದಲ್ಲಿ 1,800 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, 1000 ಮಂದಿ ಧರಣಿಗೆ ಮುಂದಾಗಿದ್ದು, 800 ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ.
ಘಟಕದ ಮುಂದೆ ಪ್ರತಿಭಟನೆ ನಡೆಸಲು ನಿರ್ಮಿಸಲಾಗಿದ್ದ ಟೆಂಟ್ ಅನ್ನು ಪೊಲೀಸರು ತೆರವು ಮಾಡಿದ್ದಾರೆ. ಆದಾಗ್ಯೂ, ಪ್ರತಿಭಟನಾನಿರತ ನೌಕರರು ಸಂಸ್ಥೆಯಿಂದ ಸ್ವಲ್ಪ ದೂರದಲ್ಲಿರುವ ತೆರೆದ ಪ್ರದೇಶದಲ್ಲಿ ಹೋರಾಟ ಮುಂದುವರೆಸಿದ್ದಾರೆ. ಪೊಲೀಸರು ಪ್ರತಿಭಟನಾನಿರತರನ್ನು ಸ್ಥಳದಿಂದ ಚದುರಿಸುವ ಕಾರ್ಯದ ನಡುವೆಯೂ ನೌಕರರು ಪಟ್ಟುಬಿಡದೆ ಹೋರಾಟ ನಡೆಸಿದ್ದಾರೆ. ಈ ನಡುವೆ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ದಾದ ನಡೆದಿದೆ.
ಪ್ರತಿಭಟನಾನಿರತ ನೌಕರರ ಮೇಲೆ ಪೊಲೀಸರ ಕ್ರಮವನ್ನು ಸಿಪಿಐ(ಎಂ) ಖಂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಕ್ಷದ ನಾಯಕ ಹಾಗೂ ಮಧುರೈ ಸಂಸದ ವೆಂಕಟೇಶನ್, 'ಪ್ರಜಾಪ್ರಭುತ್ವ ಮಾರ್ಗದಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾನೂನು ಪಾಲನೆ ಮಾಡಬೇಕಾದವರು ಸ್ಯಾಮ್ಸಂಗ್ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ' ಎಂದು ಆಕ್ರೋಶ ಹೊರಹಾಕಿದರು.
ಈ ನಡುವೆ ಪ್ರತಿಭಟನೆ ಮುಗಿಸಿ, ಕೆಲಸಕ್ಕೆ ಮರಳುವಂತೆ ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಮನವಿ ಮಾಡಿದ್ದಾರೆ. ಕೋರ್ಟ್ ಆದೇಶದ ಬಳಿಕ ಸಿಐಟಿಯು ಬೆಂಬಲಿತ ಯೂನಿಯನ್ಗೆ ಮಾನ್ಯತೆ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ.
ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು, ನೌಕರರ ಸಾರಿಗೆ, ಎಲ್ಲ ವಾಹನಗಳಿಗೆ ಎಸಿ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಂಸ್ಥೆಯ ಮ್ಯಾನೇಜ್ಮೆಂಟ್ ಪೂರೈಸಲು ಸಿದ್ದವಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.
ಇನ್ನೊಂದೆಡೆ, ನೌಕರರ ಸಮಿತಿ ಸಹಿ ಹಾಕಿದ ಒಪ್ಪಂದವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾನಿರತ ನೌಕರರು ತಿಳಿಸಿದ್ದಾರೆ. ಈ ಒಪ್ಪಂದ ಸಂಸ್ಥೆಯ ಪರವಾಗಿದೆ ಎಂದು ಸಿಐಟಿಯು ನಾಯಕರು ದೂರಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಪ್ರಥಮ ಸಂಪುಟ ಸಭೆಯಲ್ಲೇ ರಾಜ್ಯ ಸ್ಥಾನಮಾನ ಪುನಃಸ್ಥಾಪನೆಗೆ ನಿರ್ಣಯ: ಒಮರ್ ಅಬ್ದುಲ್ಲಾ