ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದ ಮೊದಲ ಮೂರು ಟಾಪ್ 3 ರಾಜ್ಯಗಳಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸೈಬರ್ ಅಪರಾಧಗಳನ್ನು ತಡೆಯಲು ಕೇಂದ್ರ ಸರ್ಕಾರ 13 ಅಂಶಗಳ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.
ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಸರ್ಕಾರಿ ಅಂಕಿ - ಅಂಶಗಳ ಪ್ರಕಾರ, 2020 ಮತ್ತು 22 ರ ನಡುವೆ ತೆಲಂಗಾಣದಲ್ಲಿ 30,596 ಪ್ರಕರಣಗಳು ದಾಖಲಾಗುವ ಮೂಲಕ ಗರಿಷ್ಠ ಸೈಬರ್ ಕ್ರೈಮ್ ಪ್ರಕರಣಗಳಿಗೆ ಸಾಕ್ಷಿಯಾದ ಮೊದಲ ರಾಜ್ಯವಾಗಿದೆ. ಅದೇ ಅವಧಿಯಲ್ಲಿ ಕರ್ನಾಟಕದಲ್ಲೂ ಸುಮಾರು 31,433 ಪ್ರಕರಣಗಳು ದಾಖಲಾಗಿವೆ. ಇನ್ನು ಮಹಾರಾಷ್ಟ್ರದಲ್ಲಿ 19,307 ಸೈಬರ್ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸಾವಿರಾರು ಪ್ರಕರಣಗಳು ದಾಖಲು, ಶಿಕ್ಷೆಯಾಗಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ:ಈ ಅಪರಾಧದಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ಹಲವಾರು ಪ್ರಕರಣಗಳನ್ನು ದಾಖಲಿಸಿದ್ದರೂ, ಶಿಕ್ಷೆಯ ಪ್ರಮಾಣ ಮಾತ್ರ ಭಾರಿ ಸಂಖ್ಯೆಯಲ್ಲಿ ಕಡಿಮೆ ಎಂಬುದನ್ನು ಕೇಂದ್ರ ಸರ್ಕಾರದ ಅಂಕಿ- ಅಂಶಗಳು ತೋರಿಸುತ್ತಿವೆ.
ಕರ್ನಾಟಕದಲ್ಲಿ ಕೇವಲ 3 ಮಂದಿ ಅರೆಸ್ಟ್, ಶಿಕ್ಷೆ ಪ್ರಮಾಣ ಶೂನ್ಯ:ಮಹಾರಾಷ್ಟ್ರವು 2020 ಮತ್ತು 23ರ ನಡುವೆ 5,912 ಪ್ರಕರಣಗಳನ್ನು ದಾಖಲಿಸಿದೆ. ಆದರೆ ಕೇವಲ 45 ಜನರಿಗೆ ಶಿಕ್ಷೆ ವಿಧಿಸಲಾಗಿದೆ. ತೆಲಂಗಾಣದಲ್ಲಿ 19,900 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದರೆ, 253 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಕೇವಲ ಆರು ಪ್ರಕರಣಗಳು ಮಾತ್ರವೇ ದಾಖಲಾಗಿವೆ. ಆದರೆ ಯಾವುದೇ ಕೇಸ್ನಲ್ಲೂ ಶಿಕ್ಷೆ ಆಗಿಲ್ಲ. ಹಾಗಾಗಿ ಶಿಕ್ಷೆಯ ಪ್ರಮಾಣ ಶೂನ್ಯವಾಗಿದೆ. ಮಹಾರಾಷ್ಟ್ರದಲ್ಲಿ 1,204 ಮಂದಿಯನ್ನು ಬಂಧಿಸಲಾಗಿದ್ದು, ತೆಲಂಗಾಣದಲ್ಲಿ 3,055 ಜನರನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ ಮೂವರನ್ನು ಮಾತ್ರ ಬಂಧಿಸಲಾಗಿದೆ.
ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಿಸ್ಟಮ್:ಹಣಕಾಸಿನ ವಂಚನೆಗಳ ತಕ್ಷಣದ ವರದಿಗಾಗಿ ಮತ್ತು ವಂಚಕರು ಹಣವನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಲು I4C ಅಡಿಯಲ್ಲಿ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಿಸ್ಟಮ್’ ಅನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ ಸರ್ಕಾರಿ ಅಂಕಿ- ಅಂಶಗಳ ಪ್ರಕಾರ, ಇಲ್ಲಿಯವರೆಗೆ 9.94 ಲಕ್ಷಕ್ಕೂ ಹೆಚ್ಚು ದೂರುಗಳಲ್ಲಿ 3,431 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.
ಸೈಬರ್ ಕ್ರೈಮ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದ ಉಪಕ್ರಮದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ , ‘ಪೊಲೀಸ್’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತಿದೆ. ಅಂದರೆ ಅದು ಸಂವಿಧಾನ ರಾಜ್ಯದ ವಿಷಯಗಳಾಗಿವೆ ಎಂದು ಹೇಳಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕಾನೂನು ಜಾರಿ ಸಂಸ್ಥೆಗಳ ಮೂಲಕ ಸೈಬರ್ ಅಪರಾಧ ಸೇರಿದಂತೆ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಕಾನೂನು ಕ್ರಮಕ್ಕೆ ಪ್ರಾಥಮಿಕವಾಗಿ ಜವಾಬ್ದಾರರಾಗಿರುತ್ತಾರೆ. ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಪಕ್ರಮಗಳನ್ನು ತಮ್ಮ LEA ಗಳ ಸಾಮರ್ಥ್ಯ ವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿ ಸಲಹೆಗಳು ಮತ್ತು ಹಣಕಾಸಿನ ನೆರವು ನೀಡುತ್ತದೆ ಎಂದು ಅವರು ವಿವರಿಸಿದರು.