ಹೈದರಾಬಾದ್ (ತೆಲಂಗಾಣ):ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ರಾಜ್ಯದಲ್ಲಿ ಮತ್ತೆರಡು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಮತ್ತು 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಆರಂಭಿಸಿದೆ.
ಸರ್ಕಾರ ಈಗಾಗಲೇ ಎರಡು ಖಾತರಿಗಳಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಆರೋಗ್ಯಶ್ರೀ ಮಿತಿಯನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಇದರೊಂದಿಗೆ ಇನ್ನೆರಡು ಗ್ಯಾರಂಟಿಗಳನ್ನೂ ಜಾರಿಗೆ ಮಾಡಿದ್ದು, ಈ ಮೂಲಕ ಕೊಟ್ಟ ಭರವಸೆಯಂತೆ 4 ಗ್ಯಾರಂಟಿಗಳನ್ನು ಜಾರಿಗೆ ತಂದಂತಾಗಿದೆ.
ಎರಡು ಗ್ಯಾರಂಟಿಗಳನ್ನು ಮಂಗಳವಾರ ಅನುಷ್ಠಾನಗೊಳಿಸಿದ ಬಳಿಕ ಮಾತನಾಡಿದ ಸಚಿವ ಉತ್ತಮ್ ಕುಮಾರ್, ಕಾಂಗ್ರೆಸ್ ಪಕ್ಷ ಚುನಾವಣೆಗೂ ಮೊದಲು ಘೋಷಿಸಿದ ಗ್ಯಾರಂಟಿಗಳಲ್ಲಿ ಒಂದಾದ 500 ರೂಪಾಯಿಗೆ ಸಿಲಿಂಡರ್ ಗ್ಯಾಸ್ ಮತ್ತು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಯೋಜನೆಯು ಇಂದಿನಿಂದ ಜಾರಿಗೆ ಬರಲಿದೆ. ಇದು ರಾಜ್ಯದ ಜನರಿಗೆ ಪಕ್ಷ ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ಇಟ್ಟ ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಬ್ಯಾಂಕ್ ಸಾಲ ಶೀಘ್ರ ಮನ್ನಾ:ಇದಕ್ಕೂ ಮೊದಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮೇಡಾರಂನಲ್ಲಿ ಮಾತನಾಡಿ, ತಿಂಗಳಾಂತ್ಯದಲ್ಲಿ 200 ಯುನಿಟ್ ಉಚಿತ ವಿದ್ಯುತ್ ಮತ್ತು 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದರು. ಜೊತೆಗೆ 2 ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಯೋಜನೆ ಜಾರಿಗೊಳಿಸಲು ಸರ್ಕಾರ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ರೈತರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ ಎಂದು ಹೇಳಿದ್ದರು.
ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ತಮ್ಮ ಸರ್ಕಾರ ಈಡೇರಿಸಲಿದೆ ಎಂದು ತಿಳಿಸಿದ ಅವರು, ಅಧಿಕಾರಕ್ಕೆ ಬಂದ 60 ದಿನಗಳಲ್ಲಿ 25 ಸಾವಿರ ಉದ್ಯೋಗಗಳನ್ನು ಭರ್ತಿ ಮಾಡಲಾಗಿದೆ. 6,956 ಸ್ಟಾಫ್ ನರ್ಸ್, 441 ಸಿಂಗರೇಣಿ ನೌಕರರು, 15,000 ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ತುಂಬಿಕೊಳ್ಳಲಾಗಿದೆ. ಮಾರ್ಚ್ನಲ್ಲಿ 6 ಸಾವಿರಕ್ಕೂ ಹೆಚ್ಚಿನ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದರು.
ತಮ್ಮ ಸರ್ಕಾರವು ಈ ಮೊದಲು ಘೋಷಿಸಿದಂತೆ 2 ಲಕ್ಷ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸಲಿದೆ. ಕಡಿಮೆ ಅವಧಿಯಲ್ಲಿ 25 ಸಾವಿರ ಉದ್ಯೋಗ ಈಗಾಗಲೇ ಭರ್ತಿ ಮಾಡಲಾಗಿದೆ ಎಂದು ನೇಮಕಗೊಂಡ ನೌಕರರಿಗೆ ಎಲ್‌ಬಿ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ವಿತರಿಸಿ ಹೇಳಿದ್ದರು.
ಇದನ್ನೂ ಓದಿ:'ಕುಟುಂಬದ ಮಹಿಳೆಗೆ ಮಾಸಿಕ ₹5 ಸಾವಿರ': ಆಂಧ್ರಪ್ರದೇಶದಲ್ಲೂ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್