ಕರ್ನಾಟಕ

karnataka

ETV Bharat / bharat

ಪ್ರಧಾನಿ ಭೇಟಿಯಾದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ: ರಾಜ್ಯದ ಬಾಕಿ ಹಣ ಬಿಡುಗಡೆಗೆ ಮನವಿ - Telangana CM Meets PM

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಪ್ರಧಾನಿ ಭೇಟಿಯಾದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಪ್ರಧಾನಿ ಮೋದಿ ಭೇಟಿಯಾದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ (IANS)

By ETV Bharat Karnataka Team

Published : Jul 4, 2024, 8:05 PM IST

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ, ಸಾರ್ವಜನಿಕ ವಲಯದ ಗಣಿ ಕಂಪನಿ ಸಿಂಗರೇಣಿ ಕೊಲಿಯರೀಸ್ ಕಂಪನಿ ಲಿಮಿಟೆಡ್ (ಎಸ್​ಸಿಸಿಎಲ್)ಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಮಂಜೂರು ಮಾಡುವಂತೆ ಮತ್ತು ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಡಿ ಭರವಸೆಗಳನ್ನುಈಡೇರಿಸುವಂತೆ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ರೆಡ್ಡಿ, 12 ವಿಷಯಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದರು. ಪ್ರಧಾನಿಯೊಂದಿಗೆ ಸಿಎಂ ರೇವಂತ್ ರೆಡ್ಡಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ವಿವಿಧ ಮೂಲಸೌಕರ್ಯ ಯೋಜನೆಗಳಿಗಾಗಿ 2,450 ಎಕರೆ ರಕ್ಷಣಾ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವಂತೆ, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಹೈದರಾಬಾದ್​ಗೆ ಮಂಜೂರು ಮಾಡಿದ ಮಾಹಿತಿ ತಂತ್ರಜ್ಞಾನ ಮತ್ತು ಹೂಡಿಕೆ ಪ್ರದೇಶ (ಐಟಿಐಆರ್) ಯೋಜನೆಯನ್ನು ಪುನರುಜ್ಜೀವನಗೊಳಿಸುವಂತೆ ಮತ್ತು ರಾಜ್ಯಕ್ಕೆ 25 ಲಕ್ಷ ಮನೆಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರವನ್ನು ಒತ್ತಾಯಿಸಿದರು.

ಸಿಂಗರೇಣಿ ಕೋಲ್ ಫೀಲ್ಡ್ ಪ್ರದೇಶದ ಅಡಿಯಲ್ಲಿ ಕಲ್ಲಿದ್ದಲು ನಿಕ್ಷೇಪಗಳನ್ನು ಕಂಪನಿಗೆ ಹಂಚಿಕೆ ಮಾಡಬೇಕೆಂದು ಸಿಎಂ ರೆಡ್ಡಿ ಕೇಂದ್ರವನ್ನು ಒತ್ತಾಯಿಸಿದರು. ಎಸ್​ಸಿಸಿಎಲ್ ನಲ್ಲಿ ತೆಲಂಗಾಣವು ಶೇಕಡಾ 51 ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ ಶೇಕಡಾ 49ರಷ್ಟು ಕೇಂದ್ರ ಸರ್ಕಾರದ ಬಳಿ ಇದೆ ಎಂದು ಸಿಎಂ ರೆಡ್ಡಿ ಉಲ್ಲೇಖಿಸಿದ್ದಾರೆ. ಹರಾಜಿಗಿಟ್ಟಿರುವ ಕಲ್ಲಿದ್ದಲು ನಿಕ್ಷೇಪಗಳಿಂದ ಶ್ರವಣಪಲ್ಲಿ ಗಣಿಯನ್ನು ತೆಗೆದುಹಾಕುವಂತೆ ಪ್ರಧಾನಿಯನ್ನು ಅವರು ಒತ್ತಾಯಿಸಿದರು.

ಭಾರತ್ ಮಾಲಾ ಪರಿಯೋಜನೆಯ ಮೊದಲ ಹಂತದ ಅಡಿಯಲ್ಲಿ ಈಗಾಗಲೇ ಅನುಮೋದನೆ ಪಡೆದ ಹೈದರಾಬಾದ್ ಪ್ರಾದೇಶಿಕ ರಿಂಗ್ ರಸ್ತೆ (ಆರ್ ಆರ್ ಆರ್ ಉತ್ತರ)ಗೆ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ರೆಡ್ಡಿ ಕೋರಿದರು. ಆರ್​ ಆರ್​ ಆರ್​ (ದಕ್ಷಿಣ) ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಬೇಕು ಮತ್ತು ಭಾರತ್ ಮಾಲಾ ಪರಿಯೋಜನ ಅಡಿಯಲ್ಲಿ ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಇಂಡಿಯಾ ಸೆಮಿಕಂಡಕ್ಟರ್ ಮಿಷನ್​​ನಲ್ಲಿ ತೆಲಂಗಾಣವನ್ನು ಸೇರಿಸುವಂತೆ ಸಿಎಂ ರೆಡ್ಡಿ ಪ್ರಧಾನಿಗೆ ಮನವಿ ಮಾಡಿದರು. ಹೈದರಾಬಾದ್​ನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಗಳನ್ನು ಸ್ಥಾಪಿಸಲು ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 'ಪ್ರವಾಹ್​' ನದಿ ಪ್ರಾಧಿಕಾರದಿಂದ 3 ದಿನ ಮಹಾದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ - Mahadayi Issue

ABOUT THE AUTHOR

...view details