ಪುಣೆ (ಮಹಾರಾಷ್ಟ್ರ):ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಾತಿನ ಸಮರ ಜೋರಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಸೋಮವಾರ ಪ್ರಚಾರ ನಡೆಸಿದ್ದು, ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಅಜಿತ್ ಪವಾರ್, ಅಶೋಕ್ ಚೌಹಾಣ್ ಅವರನ್ನು ಪ್ರಧಾನಿ ಮೋದಿಯ ಗುಲಾಮರು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ನಿರಾಕರಿಸಿದ್ದು, ಸಮಿತಿ ರಚಿಸಿ ತೆಲಂಗಾಣಕ್ಕೆ ಕಳುಹಿಸಿ. ಸತ್ಯಾಸತ್ಯತೆ ತಿಳಿಯಲಿದೆ ಎಂದು ಸವಾಲು ಹಾಕಿದ್ದಾರೆ.
ಪಿಎಂ ಮೋದಿಗೆ ಸಿಎಂ ರೆಡ್ಡಿ ಸವಾಲು:ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ತಾನು ಘೋಷಿಸಿದ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದ ಪ್ರಧಾನಿ ಮೋದಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ರೇವಂತ್ ರೆಡ್ಡಿ, "ನಿಮಗೆ ಧೈರ್ಯವಿದ್ದರೆ ಸಮಿತಿ ರಚಿಸಿ ತೆಲಂಗಾಣಕ್ಕೆ ಕಳುಹಿಸಿಕೊಡಿ. ನಿಮ್ಮಲ್ಲಿ ಹಣವಿಲ್ಲದಿದ್ದರೆ ನಾವೇ ಹೆಲಿಕಾಪ್ಟರ್ ಕಳುಹಿಸುತ್ತೇವೆ. ಕೊಟ್ಟ ಭರವಸೆಗಳು ಜಾರಿಯಾಗಿವೆಯೇ ಇಲ್ಲವೇ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ" ಎಂದು ಸವಾಲು ಹಾಕಿದರು.
ತೆಲಂಗಾಣದಲ್ಲಿ ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೆವು. ಸರ್ಕಾರ ರಚನೆಯಾದ 25 ದಿನಗಳಲ್ಲಿ 23 ಲಕ್ಷ ರೈತರ 18 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದೇವೆ. ಹಾಗೆಯೇ, 10 ತಿಂಗಳಲ್ಲಿ 50 ಸಾವಿರ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ಜಾರಿ ಮಾಡಿದ್ದೇವೆ. ಬಡವರಿಗೆ 500 ಯೂನಿಟ್ ಮತ್ತು ಸಾಮಾನ್ಯ ಜನರಿಗೆ 200 ಯೂನಿಟ್ ವಿದ್ಯುತ್ ಕೊಟ್ಟಿದ್ದೇವೆ ಎಂದು ರೆಡ್ಡಿ ವಿವರಿಸಿದರು.
ಮೋದಿಯ ಗುಲಾಮರು:ಮುಖ್ಯಮಂತ್ರಿ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ಬೆನ್ನಿಗೆ ಚೂರಿ ಇರಿದು ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಾಗಿದ್ದಾರೆ. ಅಜಿತ್ ಪವಾರ್ ಕೂಡ ಶರದ್ ಅವರಿಗೆ ಮೋಸ ಮಾಡಿ ಮೋದಿ ಅವರ ಗುಲಾಮರಾಗಿದ್ದಾರೆ. ಅಶೋಕ್ ಚೌಹಾಣ್ ಅವರು ಕಾಂಗ್ರೆಸ್ಗೆ ವಂಚಿಸಿ ಮೋದಿ ಗುಲಾಮಗಿರಿ ಮಾಡುತ್ತಿದ್ದಾರೆ. ಮಹಾರಾಷ್ಟ್ರವನ್ನು ದೇಶದ್ರೋಹಿಗಳ ಗೂಡನ್ನಾಗಿ ಮಾಡಲಾಗಿದೆ ಎಂದು ಮಹಾಯುತಿ ಸರ್ಕಾರವನ್ನು ಕಟುವಾಗಿ ಟೀಕಿಸಿದರು.
ವಿಧಾನಸಭಾ ಚುನಾವಣೆಗೂ ಮೊದಲೇ ಬಿಜೆಪಿ ಪಲಾಯನ ಮಾಡಿದೆ. ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿಗೆ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಗಳೇ ಆಧಾರ. ಈಗ ಏಕ್ ಹೈ ತೋ ಸೇಫ್ ಹೈ ಎಂದು ಹೇಳುವ ಮೂಲಕ ಮಹಾರಾಷ್ಟ್ರವನ್ನು ಅದಾನಿ ಅವರಿಗೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಎಐಎಡಿಎಂಕೆ ಜೊತೆ ನಟ ದಳಪತಿ ವಿಜಯ್ರ ಟಿವಿಕೆ ಮೈತ್ರಿ?: ಪಕ್ಷದ ಸ್ಪಷ್ಟನೆ ಹೀಗಿದೆ