ಚೆನ್ನೈ(ತಮಿಳುನಾಡು):ವಯನಾಡ್ ಭೂಕುಸಿತ ಸಂತ್ರಸ್ತರಿಗೆ ತಮಿಳುನಾಡಿನ ಮಹಿಳಾ ಆಟೋ ಚಾಲಕಿಯೊಬ್ಬರು ಪ್ರತಿ ವಾರ ತಾನು ಸಂಪಾದಿಸುವ ದುಡಿಮೆಯ ಪೈಕಿ ಎರಡು ದಿನದ ದುಡಿಮೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದಾರೆ. ಚೆನ್ನೈನ ಪೆರಂಪುರದ ರಾಜಿ ಎಂಬ ಆಟೋ ಚಾಲಕಿ ಭಾನುವಾರ ಮತ್ತು ಸೋಮವಾರದ ಸಂಪೂರ್ಣ ಹಣವನ್ನು ಸಂತ್ರಸ್ತರಿಗಾಗಿ ನೀಡುತ್ತಿದ್ದಾರೆ.
ಅಷ್ಟೇ ಅಲ್ಲ, ರಾಜಿ ತಮ್ಮ ಆಟೋದಲ್ಲಿ ಯುಪಿಐ ಸೌಲಭ್ಯದ ಜಾಗೃತಿ ಬ್ಯಾನರ್ ಅಳವಡಿಸಿದ್ದಾರೆ. ಗ್ರಾಹಕರು ಕೂಡಾ ಇಲ್ಲಿ ನೇರವಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಪಾವತಿಸಬಹುದು. ಆನ್ಲೈನ್ ವಹಿವಾಟು ಸೌಲಭ್ಯವಿಲ್ಲದ ವ್ಯಕ್ತಿಗಳಿಗೂ ಕೂಡ ಆಟೋರಿಕ್ಷಾದೊಳಗೆ ಹುಂಡಿ ಇಟ್ಟಿದ್ದಾರೆ. ಬಾಲಾ ಎಂಬ ನಟರೊಂದಿಗೆ ರಾಜಿ ಈ ನಿಧಿ ಒದಗಿಸುವ ಜಾಗೃತಿ ಪ್ರಾರಂಭಿಸಿದ್ದಾರೆ.
'ಈಟಿವಿ ಭಾರತ'ದ ಜೊತೆ ಮಾತನಾಡಿದ ರಾಜಿ, "ಗ್ರಾಹಕರು ನನ್ನ ಆಟೋ ಹತ್ತಿದ ತಕ್ಷಣ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯ ಮಾಡಲು ನಾನು ಮನವಿ ಮಾಡುತ್ತೇನೆ. ಹೆಚ್ಚಿನ ಗ್ರಾಹಕರು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಿದ್ದಾರೆ. ಆನ್‌ಲೈನ್‌ನಲ್ಲಿ ಹಣದ ವಹಿವಾಟು ಮಾಡಲು ಸಾಧ್ಯವಾಗದ ಜನರು ಹುಂಡಿಗೆ ಹಾಕುತ್ತಾರೆ" ಎಂದು ಹೇಳಿದರು.
"ಸಹಾಯ ಮಾಡಲು ಯಾರಾದರೂ ಮುಂದೆ ಬಂದರೆ ಸಂತೋಷ. ನಮ್ಮದೇ ಕುಟುಂಬಕ್ಕೆ ಸಹಾಯ ಮಾಡುವಂತೆ ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡಲು ಎಲ್ಲರೂ ಮುಂದಾಗಬೇಕು. ಕೇರಳ ಮುಖ್ಯಮಂತ್ರಿಗಳು ಪರಿಹಾರ ನಿಧಿ ಸಂಗ್ರಹಿಸುವುದನ್ನು ನಿಲ್ಲಿಸುವವರೆಗೂ ನಾನು ಭಾನುವಾರ ಮತ್ತು ಸೋಮವಾರ ನನ್ನ ಆದಾಯವನ್ನು ಪರಿಹಾರ ನಿಧಿಗೆ ನೀಡುವುದನ್ನು ಮುಂದುವರಿಸುತ್ತೇನೆ" ಎಂದು ರಾಜಿ ತಿಳಿಸಿದರು.
ಇದನ್ನೂ ಓದಿ:ಟಿಬಿ ಡ್ಯಾಂನಿಂದ ಅಪಾರ ನೀರು ಹೊರಕ್ಕೆ: ಇಂದು ಮಧ್ಯಾಹ್ನ ಭೇಟಿ ನೀಡಲಿರುವ ವಿಪಕ್ಷ ನಾಯಕರು - Tungabhadra dam