ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಕಾರಿ ಅಧ್ಯಕ್ಷ, ಶಾಸಕ ಮತ್ತು ಮಾಜಿ ಸಚಿವ ಕೆ.ಟಿ.ರಾಮರಾವ್ (ಕೆಟಿಆರ್) ಸೋಮವಾರ ಹೈದರಾಬಾದಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. 2023ರ ಫೆಬ್ರವರಿಯಲ್ಲಿ ಹೈದರಾಬಾದಿನಲ್ಲಿ ನಡೆದ ಫಾರ್ಮುಲಾ-ಇ ರೇಸ್ಗೆ ಸಂಬಂಧಿಸಿದಂತೆ ಕೆಟಿಆರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಎಎನ್ಐ ಜೊತೆ ಮಾತನಾಡಿದ ಕೆ.ಟಿ.ರಾಮರಾವ್, "ವಿಚಾರಣೆಯ ಸಮಯದಲ್ಲಿ ತನ್ನೊಂದಿಗೆ ವಕೀಲರನ್ನು ಜೊತೆಯಾಗಿ ಇರಿಸಿಕೊಳ್ಳಲು ಎಸಿಬಿ ಅವಕಾಶ ನೀಡುತ್ತಿಲ್ಲ" ಎಂದು ಆರೋಪಿಸಿದರು.
#WATCH | Hyderabad | BRS working president KT Rama Rao says, " i am here as a law-abiding citizen respecting the high court, respecting anti corruption bureau's direction to appear before them. i'm here, but they're not allowing my advocates, they're not allowing me to have my own… pic.twitter.com/dndSusfggA
— ANI (@ANI) January 6, 2025
"ಕಾನೂನು ಪಾಲಿಸುವ ನಾಗರಿಕನಾಗಿರುವ ನಾನು ಹೈಕೋರ್ಟ್ ಅನ್ನು ಗೌರವಿಸುತ್ತೇನೆ. ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದ ಭ್ರಷ್ಟಾಚಾರ ನಿಗ್ರಹ ದಳದ ಆದೇಶವನ್ನೂ ಗೌರವಿಸುತ್ತೇನೆ. ಆದರೆ ಅವರು ವಕೀಲರು ನನ್ನ ಜೊತೆಗಿರಲು ಅವಕಾಶ ನೀಡುತ್ತಿಲ್ಲ. ನನ್ನ ಹಕ್ಕುಗಳನ್ನು ಪಡೆಯಲು ನನಗೆ ಅವಕಾಶ ನೀಡುತ್ತಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ಹೈಕೋರ್ಟ್ ತೀರ್ಪನ್ನು ಗೌರವಿಸಬೇಕು. ವಾಸ್ತವವಾಗಿ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಒಬ್ಬ ವ್ಯಕ್ತಿಯಾಗಿ ಮತ್ತು ನಾಗರಿಕನಾಗಿ ನನ್ನ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ನಾನು ಎಸಿಬಿಗೆ ಮನವಿ ಮಾಡುತ್ತಿದ್ದೇನೆ. ನನ್ನ ವಕೀಲರನ್ನು ಜೊತೆಗಿರಿಸಿಕೊಳ್ಳುವ ಹಕ್ಕು ನನಗಿದೆ. ಆದರೆ ದುರದೃಷ್ಟವಶಾತ್ ಅವರ ನಿಲುವು ಬೇರೆಯಾಗಿದೆ. ನಾನು ಕಾನೂನನ್ನು ಪಾಲಿಸುವ ನಾಗರಿಕ. ಹೀಗಾಗಿಯೇ ಇಲ್ಲಿಗೆ ಬಂದಿದ್ದೇನೆ. ಆದರೆ ಅವರು ನನ್ನ ಹಕ್ಕುಗಳ ರಕ್ಷಣೆ ಮಾಡದಿದ್ದರೆ ವಿಚಾರಣೆಯಿಂದ ಹಿಂದೆ ಸರಿಯುವ ಹಕ್ಕು ನನಗಿದೆ" ಎಂದು ಕೆ.ಟಿ.ರಾಮರಾವ್ ಹೇಳಿದರು.
ಏನಿದು ಪ್ರಕರಣ?: ಹಿಂದಿನ ಆಡಳಿತದ ಅವಧಿಯಲ್ಲಿ ಹೈದರಾಬಾದ್ನಲ್ಲಿ ಫಾರ್ಮುಲಾ-ಇ ರೇಸ್ ನಡೆಸಲು ಅನುಮತಿಯಿಲ್ಲದೆ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿಸಿದ ಆರೋಪದ ಮೇಲೆ ತೆಲಂಗಾಣ ಎಸಿಬಿ ಡಿಸೆಂಬರ್ 19ರಂದು ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಮತ್ತು ಶಾಸಕ ರಾಮರಾವ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಇಡಿ ಕೂಡ ಕೆಟಿಆರ್ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ದಾಖಲಿಸಿದೆ.
ಫಾರ್ಮುಲಾ-ಇ ಫಂಡಿಂಗ್ ಪ್ರಕರಣದಲ್ಲಿ ಎಸಿಬಿ ಕೆಟಿಆರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ದಾಖಲಿಸಿದೆ. ಎಫ್ಐಆರ್ನಲ್ಲಿ ಕೆಟಿಆರ್ ಅವರನ್ನು ಪ್ರಾಥಮಿಕ ಆರೋಪಿಯಾಗಿ, ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಮತ್ತು ನಿವೃತ್ತ ಅಧಿಕಾರಿ ಬಿ.ಎಲ್.ಎನ್.ರೆಡ್ಡಿ ಅವರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಛತ್ತೀಸ್ಗಢ ಪತ್ರಕರ್ತನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಹೈದರಾಬಾದ್ನಲ್ಲಿ ಸೆರೆ - CHHATTISGARH JOURNALIST MURDER