ಚೆನ್ನೈ: ತಮಿಳುನಾಡು ದೇಶದ ದ್ರಾಕ್ಷಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲೊಂದಾಗಿದೆ. ರಾಜ್ಯದಲ್ಲಿ ಎರಡು ಪ್ರಮುಖ ಜಾತಿಯ ಬೆಳೆಗಳಾದ ಪನ್ನೀರ್ ತಿರಾಚೈ (ಮಸ್ಕತ್ ಹ್ಯಾಂಬರ್ಗ್) ಮತ್ತು ಒಡೈಪಟ್ಟಿ ಬೀಜರಹಿತ ದ್ರಾಕ್ಷಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಕಳೆದ ಕೆಲ ವಾರಗಳಲ್ಲಿ ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ದ್ರಾಕ್ಷಿ ಇಳುವರಿಯಲ್ಲಿ ಭಾರಿ ಕುಸಿತವಾಗಲಿದೆ ಎಂಬ ಆತಂಕದಿಂದ ಈ ಪ್ರದೇಶದ ದ್ರಾಕ್ಷಿ ರೈತರು ನಿರಾಶೆಗೊಂಡಿದ್ದಾರೆ.
"ಹೆಚ್ಚಿನ ತಾಪಮಾನದಿಂದಾಗಿ ಬೆಳೆಯ ಇಳುವರಿಯಲ್ಲಿ ತೀವ್ರ ಕುಸಿತವಾಗಲಿದೆ" ಎಂದು ಸುಮಾರು 10 ಎಕರೆ ಭೂಮಿಯಲ್ಲಿ ಪನ್ನೀರ್ ತಿರಾಚೈ ಬೆಳೆದಿರುವ ಥೇಣಿಯ ರೈತ ಕೆ. ಮುನಿಯಂಡಿ ಐಎಎನ್ಎಸ್ಗೆ ತಿಳಿಸಿದರು.
"ಸಾಮಾನ್ಯವಾಗಿ ನಾವು ಒಂದು ಎಕರೆ ಜಮೀನಿನಿಂದ 10-12 ಟನ್ ದ್ರಾಕ್ಷಿ ಇಳುವರಿ ಪಡೆಯುತ್ತೇವೆ. ಆದರೆ ಈ ಬಾರಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿರುವುದರಿಂದ ಇಳುವರಿ ಎಕರೆಗೆ ಮೂರು ಟನ್ ಗಳಿಗಿಂತ ಕಡಿಮೆಯಾಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದರು.
ಒಂದು ಎಕರೆ ದ್ರಾಕ್ಷಿ ಕೃಷಿಗೆ ರೈತ ಸುಮಾರು 1.25 ಲಕ್ಷ ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಹೀಗಿರುವಾಗ ಇಳುವರಿ ಎಕರೆಗೆ ಕೇವಲ ಮೂರು ಟನ್ಗೆ ಕುಸಿದರೆ ರೈತರ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಅವರು ನೋವು ತೋಡಿಕೊಂಡರು.
ಈ ಬಗ್ಗೆ ಐಎಎನ್ಎಸ್ನೊಂದಿಗೆ ಮಾತನಾಡಿದ ಪನ್ನೀರ್ ತಿರಾಚೈ ರೈತರ ಸಂಘದ ಮುಖಂಡ ಕರುಪ್ಪನನ್ ರಾಜು, "ಕುಂಬಮ್ ಪ್ರದೇಶದ ಸುಮಾರು 90 ಪ್ರತಿಶತದಷ್ಟು ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಆದರೆ ಬಿಸಿಗಾಳಿಯಿಂದ ಕೃಷಿ ಹಾಳಾಗಿದೆ. ಸುಮಾರು 300 ರೈತರು 5,000 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಇವರೆಲ್ಲರೂ ಭಾರಿ ನಷ್ಟದ ಆತಂಕದಲ್ಲಿದ್ದಾರೆ. ನಷ್ಟಕ್ಕೀಡಾದ ರೈತರಿಗೆ ತಮಿಳುನಾಡು ಕೃಷಿ ಇಲಾಖೆ ಪರಿಹಾರ ನೀಡಬೇಕು" ಎಂದು ಹೇಳಿದರು.
ಇನ್ನು ಒಡೈಪಟ್ಟಿ ಬೀಜರಹಿತ ದ್ರಾಕ್ಷಿ ಬೆಳೆಯುವ ರೈತರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಥೇಣಿ ಜಿಲ್ಲೆಯ ಒಡೈಪಟ್ಟಿ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿಯಲ್ಲಿ ಬೀಜರಹಿತ ದ್ರಾಕ್ಷಿ ಬೆಳೆಯಲಾಗುತ್ತದೆ. ಸುಮಾರು 200 ರೈತರು ಇಲ್ಲಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಐಎಎನ್ಎಸ್ ಜೊತೆ ಮಾತನಾಡಿದ ದ್ರಾಕ್ಷಿ ಬೆಳೆಗಾರ ಕೃಷ್ಣನ್ ಥೇವರ್, "ಸಾಮಾನ್ಯವಾಗಿ ನಮಗೆ ಒಂದು ಎಕರೆಯಲ್ಲಿ 12 ಟನ್ ದ್ರಾಕ್ಷಿ ಇಳುವರಿ ಬರುತ್ತಿತ್ತು. ಆದರೆ ಈಗ ಇದು ಕೇವಲ ಮೂರು ಟನ್ಗೆ ಕುಸಿದಿರುವುದರಿಂದ ಮುಂದೇನು ಮಾಡುವುದೆಂದು ತೋಚದಂತಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಬೆಳೆ ನಷ್ಟವಾದಾಗ ಕಬ್ಬು ಮತ್ತು ಭತ್ತಕ್ಕೆ ನೀಡುವಂತೆ ರಾಜ್ಯ ಸರ್ಕಾರವು ಒಡೈಪಟ್ಟಿ ದ್ರಾಕ್ಷಿಗೆ ಪ್ರತಿ ಕೆ.ಜಿ.ಗೆ 50 ರೂ.ಗಳಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು. ತಮಿಳುನಾಡು ಸರ್ಕಾರ ಈಗಾಗಲೇ ಒಡೈಪಟ್ಟಿ ಬೀಜರಹಿತ ದ್ರಾಕ್ಷಿಗೆ ಜಿಐ ಟ್ಯಾಗ್ ಅನ್ನು ಪ್ರಸ್ತಾಪಿಸಿದೆ. ಇದು ಈ ದ್ರಾಕ್ಷಿಗಳ ರಫ್ತನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದರೆ ಪ್ರಸ್ತುತ ಭಾರಿ ನಷ್ಟವನ್ನು ಹೇಗೆ ತುಂಬಿಸುವುದು ಎಂಬ ಬಗ್ಗೆ ರೈತರು ಚಿಂತಿತರಾಗಿದ್ದಾರೆ.
ಇದನ್ನೂ ಓದಿ : 'ಜಾಮೀನು ಸಿಕ್ಕಿದ್ದು ಕೇಜ್ರಿವಾಲ್ಗೆ, ಸಿಎಂ ಇನ್ನೂ ಜೈಲಿನಲ್ಲಿದ್ದಾರೆ': ಬಿಜೆಪಿ ಮುಖಂಡ ಅನಿಲ್ ವಿಜ್ ವಾಗ್ದಾಳಿ - Arvind Kejriwal