ಕೃಷ್ಣಗಿರಿ (ತಮಿಳುನಾಡು) :13 ವರ್ಷದ ಅಪ್ರಾಪ್ತ ಶಾಲಾ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಿಣಿಯನ್ನಾಗಿಸಿದ ಆರೋಪದಡಿ ಮೂವರು ಶಿಕ್ಷಕರನ್ನು ಬಂಧಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಯ ತಾಯಿ ನೀಡಿದ ದೂರಿನನ್ವಯ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿರುವುದಾಗಿ ಕೃಷ್ಣಗಿರಿ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬರುತ್ತಿದ್ದಂತೆ ಕೃಷ್ಣಗಿರಿಯ ಪ್ರಧಾನ ಶಿಕ್ಷಣ ಅಧಿಕಾರಿ (ಪ್ರಭಾರ) ಮುನಿರಾಜ್ ಮೂವರು ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.
ವಿದ್ಯಾರ್ಥಿನಿಯು ಒಂದು ತಿಂಗಳು ಶಾಲೆಗೆ ಬರದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ವಿಧ್ಯಾರ್ಥಿನಿಯ ಮನೆಗೆ ತೆರಳಿ ವಿಚಾರಿಸಿದಾಗ ಆಕೆ ಗರ್ಭಿಣಿ ಎಂಬ ವಿಷಯ ಗೊತ್ತಾಗಿದೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಶಿಕ್ಷಕರು ತನ್ನ ಮಗಳು ಗರ್ಭಿಣಿ ಆಗಲು ಕಾರಣವೆಂದು ಬಾಲಕಿಯ ತಾಯಿ ಆರೋಪಿಸಿದ್ದರು. ವಿಷಯ ತಿಳಿದು ಮುಖ್ಯೋಪಾಧ್ಯಾಯರು ಆಘಾತಕ್ಕೊಳಗಾಗಿದ್ದರು.