ಜಮ್ಮು ಕಾಶ್ಮೀರ: ಜಮ್ಮು ವಲಯದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಮಂಗಳವಾರ ಸಂಭವಿಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಜಮ್ಮುವಿನ ಅಖ್ನೂರ್ ಸೆಕ್ಟರ್ನ ಲಾಲಿಯಾಲಿಯಲ್ಲಿ ಸೇನಾ ಸಿಬ್ಬಂದಿ ಗಡಿಯ ಬಳಿ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಸೇನೆ ತಿಳಿಸಿದೆ.
ಸ್ಪೋಟ ಸಂಭವಿಸಿರುವುದನ್ನು ವೈಟ್ ನೈಟ್ ಕಾರ್ಪ್ಸ್ ದೃಢಪಡಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ಲಾಲಿಯಾಲಿ ಅಖ್ನೂರ್ ಸೆಕ್ಟರ್ನಲ್ಲಿ ಗಡಿ ಗಸ್ತು ನಡೆಯುತ್ತಿದ್ದ ವೇಳೆ ಶಂಕಿತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಸೇನಾ ಪಡೆಗಳು ಈ ಪ್ರದೇಶದಲ್ಲಿ ನಿಯಂತ್ರಣ ಸಾಧಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಹುತಾತ್ಮರಾದ ಇಬ್ಬರು ಶೌರ್ಯಶಾಲಿ ಸೈನಿಕರ ಸರ್ವೋಚ್ಚ ತ್ಯಾಗಕ್ಕೆ ವೈಟ್ ನೈಟ್ ಕಾರ್ಪ್ಸ್ ವಂದಿಸುತ್ತದೆ ಮತ್ತು ಗೌರವ ಸಲ್ಲಿಸುತ್ತದೆ" ಎಂದು ಹೇಳಿದೆ.