ಅಹಮದಾಬಾದ್(ಗುಜರಾತ್): ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ಇತ್ತೀಚಿಗೆ ತಿರಸ್ಕೃತಗೊಂಡಿತ್ತು. ಇದಾದ ನಂತರ ಕಣದಲ್ಲಿದ್ದ ಇತರ ಅಭ್ಯರ್ಥಿಗಳೂ ಕೂಡಾ ತಮ್ಮ ನಾಮಪತ್ರಗಳನ್ನು ಹಿಂಪಡೆದ ಬಳಿಕ ಈ ಸ್ಥಾನದಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಕಾಂಗ್ರೆಸ್ ಮಾತನಾಡಿತ್ತು. ಇದೀಗ ಕುಂಭಾಣಿ ಬಗ್ಗೆಯೂ ಪಕ್ಷ ಕಟ್ಟುನಿಟ್ಟಿನ ನಿಲುವು ತಳೆದಿದೆ. ನೀಲೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ನೀಲೇಶ್‌ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಲು ಕಾಂಗ್ರೆಸ್ ಶಿಸ್ತು ಸಮಿತಿ ನಿರ್ಧರಿಸಿದೆ. ಸೂರತ್ ಕ್ಷೇತ್ರದಿಂದ ನಾಮಪತ್ರ ರದ್ದತಿ ಹೊಣೆಯನ್ನು ನೀಲೇಶ್ ಮೇಲೆಯೇ ಸಮಿತಿ ಹೊರಿಸಿದೆ. ನಾಮಪತ್ರ ರದ್ದತಿ ನಿಮ್ಮ ನಿರ್ಲಕ್ಷ್ಯ ಅಥವಾ ಬಿಜೆಪಿ ಜೊತೆಗಿನ ಒಡನಾಟವನ್ನು ತೋರಿಸುತ್ತದೆ ಎಂದು ಸಮಿತಿ ಹೇಳಿದೆ.