ಕರ್ನಾಟಕ

karnataka

ETV Bharat / bharat

ಮತ್ತೆ ಜೈಲು ಪಕ್ಕಾ: ದೆಹಲಿ ಸಿಎಂ ಕೇಜ್ರಿವಾಲ್​ ಜಾಮೀನು ಅವಧಿ ವಿಸ್ತರಣೆ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ - interim bail plea - INTERIM BAIL PLEA

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಮತ್ತೆ ಜೈಲು ಸೇರುವುದು ಖಚಿತವಾಗಿದೆ. ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಲು ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಜಾ ಆಗಿದೆ.

ದೆಹಲಿ ಸಿಎಂ ಕೇಜ್ರಿವಾಲ್​ ಅರ್ಜಿ ಸುಪ್ರೀಂನಲ್ಲಿ ವಜಾ
ದೆಹಲಿ ಸಿಎಂ ಕೇಜ್ರಿವಾಲ್​ ಅರ್ಜಿ ಸುಪ್ರೀಂನಲ್ಲಿ ವಜಾ (ETV Bharat)

By ETV Bharat Karnataka Team

Published : May 29, 2024, 3:20 PM IST

ನವದೆಹಲಿ:ಅನಾರೋಗ್ಯ ಹಿನ್ನೆಲೆ ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಮಂಗಳವಾರವಷ್ಟೇ ನಿರಾಕರಿಸಿದ್ದ ಸುಪ್ರೀಂಕೋರ್ಟ್​ ಬುಧವಾರ ಅದನ್ನು ವಜಾ ಮಾಡಿದೆ.

ದೆಹಲಿ ಮದ್ಯ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಮೇ 10 ರಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ನೀಡಲಾದ ಅವಧಿಯು ಮುಗಿದಿದ್ದು, ಜೂನ್​ 2 ರಂದು ಮತ್ತೆ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕಿದೆ.

ಆದರೆ, ತಮಗೆ ಗಂಭೀರ ಅನಾರೋಗ್ಯ ಸಮಸ್ಯೆಗಳಿದ್ದು, ಅವುಗಳಿಗೆ ಚಿಕಿತ್ಸೆ ಪಡೆಯಬೇಕಿದೆ. ಒಂದು ವಾರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು. ಮಂಗಳವಾರ ನಡೆದ ವಾದದಲ್ಲಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೇಜ್ರಿವಾಲ್​​ ಅವರ ಪರ ವಕೀಲರು ಕೋರಿದ್ದರು. ಆದರೆ, ಇದನ್ನು ಕೋರ್ಟ್​ ಮಾನ್ಯ ಮಾಡಿರಲಿಲ್ಲ. ಇಂದು ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿದ್ದು, ಅವಧಿ ವಿಸ್ತರಿಸಲು ನಿರಾಕರಿಸಿ ಅರ್ಜಿಯನ್ನು ವಜಾ ಮಾಡಿದ್ದಾರೆ.

ಅರ್ಜಿಯಲ್ಲಿ ಏನಿತ್ತು?:ಬಂಧನದ ನಂತರ ತೂಕ 7 ಕೆಜಿ ಕಡಿಮೆಯಾಗಿದೆ. ಕೀಟೋನ್ ಮಟ್ಟವೂ ತುಂಬಾ ಹೆಚ್ಚಾಗಿದೆ. ಇದು ಕೆಲವು ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. PET-CT ಸ್ಕ್ಯಾನ್ ಮತ್ತು ಹಲವಾರು ಪರೀಕ್ಷೆಗಳಿಗೆ ಒಳಗಾಗುವ ಅಗತ್ಯವನ್ನು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜಾಮೀನು ಅವಧಿಯನ್ನು 7 ದಿನಗಳ ಕಾಲ ವಿಸ್ತರಿಸಿ ಎಂದು ಅರವಿಂದ್​​ ಕೇಜ್ರಿವಾಲ್​​ ಅವರು ಕೋರಿದ್ದರು.

ಜೂನ್​ 2 ರಂದು ಶರಣಾಗತಿ:ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಅಬಕಾರಿ ಹಗರಣದಲ್ಲಿ ಬಂಧಿತರಾದ 50 ದಿನಗಳ ಬಳಿಕ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಜೂನ್​ 1ಕ್ಕೆ ಅದರ ಅವಧಿ ಮುಗಿಯಲಿದೆ. ಜೂನ್​ 2 ಮಧ್ಯಾಹ್ನದ ಒಳಗೆ ಅವರು ತಿಹಾರ್​ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಸುಪ್ರೀಂಕೋರ್ಟ್​ ಷರತ್ತು ವಿಧಿಸಿದೆ.

ಚುನಾವಣಾ ಫಲಿತಾಂಶಕ್ಕೂ ಮೊದಲು ಮತ್ತೆ ಜೈಲಿಗೆ:ಜೂನ್​ 1 ರಂದು ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯಲಿದೆ. ಜೂನ್​ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇದಕ್ಕೂ ಮೊದಲು ದೆಹಲಿ ಸಿಎಂ ಮತ್ತೆ ತಿಹಾರ್​ ಜೈಲು ಪಾಲಾಗಲಿದ್ದಾರೆ. ಸದ್ಯ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಪಂಜಾಬ್​ನಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಮೇ 30 ರ ರಾತ್ರಿ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಅರವಿಂದ್​ ಕೇಜ್ರಿವಾಲ್​ ಜಾಮೀನು ಅವಧಿ ವಿಸ್ತರಣೆ ಅರ್ಜಿ ತುರ್ತು ವಿಚಾರಣೆಗೆ ಒಪ್ಪದ ಸುಪ್ರೀಂಕೋರ್ಟ್​ - interim bail extension

ABOUT THE AUTHOR

...view details