ನವದೆಹಲಿ:ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಪ್ರಮುಖ ದಾಖಲೆಗಳು ಮರೆಯಾಗಿದ್ದರ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ಸೋಮವಾರ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡುವ ಮುನ್ನದ ಪ್ರಮುಖ ದಾಖಲೆಯನ್ನು ಕೇಳಿತು. ಸಿಬಿಐ ಮತ್ತು ಪಶ್ಚಿಮಬಂಗಾಳ ಸರ್ಕಾರ ಈ ದಾಖಲೆಯನ್ನು ನೀಡದ ಕಾರಣ, ಅಸಮಾಧಾನ ವ್ಯಕ್ತಪಡಿಸಿತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡುವಾಗ ಚಲನ್ (ದಾಖಲೆ) ನೀಡಲಾಗುತ್ತದೆ. ಈ ವೇಳೆ ಶವದ ಮೇಲಿನ ಬಟ್ಟೆ, ಇತರ ವಸ್ತುಗಳನ್ನು ಹಾಜರುಪಡಿಸಲಾಗಿದೆಯೇ ಎಂಬುದನ್ನು ಆ ದಾಖಲೆ ವಿವರಿಸುತ್ತದೆ. ಅದನ್ನು ಕೋರ್ಟ್ಗೆ ನೀಡಿಲ್ಲ ಏಕೆ ಎಂದು ಪೀಠ ಪ್ರಶ್ನಿಸಿತು.
ಸಿಬಿಐ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿ, ಚಲನ್ ತಮ್ಮ ದಾಖಲೆಗಳ ಭಾಗವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ತಕ್ಷಣವೇ ಆ ದಾಖಲೆಯನ್ನು ನೀಡಲು ಸಾಧ್ಯವಾಗಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲು ಸಮಯ ನೀಡಬೇಕು ಎಂದು ಕೇಳಿದರು.