ಕೋರಾಪುಟ್(ಒಡಿಶಾ): ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ, ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದ ಕೋರಾಪುಟ ಜಿಲ್ಲೆಯ ಬಾಲಕನೋರ್ವ ಇದೀಗ ಶಾಲೆಗೆ ಹೋಗದ ಹಾಗೂ ಹೋಗಲು ಸಾಧ್ಯವಾಗದ ಗ್ರಾಮದ ಇತರ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾನೆ.
ಕೋರಾಪುಟ ಜಿಲ್ಲೆಯ ಬೋರಿಗುಮ್ಮ ಬ್ಲಾಕ್ನ ಮಾಲಿಗುಡ ಗ್ರಾಮದ ನಿವಾಸಿ ದೊಮ್ ಪೂಜಾರಿ ಎಂಬಾತನೇ ಬಾಲಕ. ದೊಮ್ ಸಣ್ಣದಿರುವಾಗಲೇ ತಂದೆ ಸಾವನ್ನಪ್ಪಿದ್ದು, ತಾಯಿ ಬಿಟ್ಟುಹೋಗಿದ್ದಾರೆ. ಎಪ್ಪತ್ತು ವರ್ಷದ ಅಜ್ಜಿ ದಸ್ಮಾ ಪೂಜಾರಿ ಜತೆಗೆ ದೊಮ್ ಪೂಜಾರಿ ವಾಸಿಸುತ್ತಿದ್ದಾನೆ. ಅಜ್ಜಿ ಒಬ್ಬಳೇ ದೊಮ್ನನ್ನು ಬೆಳೆಸಿದ್ದಳು. ಸಾಧ್ಯವಾದಷ್ಟು ಶಾಲೆಗೂ ಕಳುಹಿಸಿದ್ದಳು. ಎರಡು ವರ್ಷಗಳ ಹಿಂದೆ ದೊಮ್ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಪೂರೈಸಿದ್ದ. ನಂತರ ಅಜ್ಜಿ, ನನಗೆ ಇನ್ನು ಮುಂದೆ ಶಾಲೆಗೆ ಕಳುಹಿಸಲು ಸಾಮರ್ಥ್ಯ ಇಲ್ಲ ಎಂದು ಹೇಳಿದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು. ನಂತರ ಅಜ್ಜಿಯ ಜತೆಗೆ ದೊಮ್ ಕೂಡ ಚಿಕ್ಕ ಜಮೀನಿನಲ್ಲಿ ಕೆಲಸಕ್ಕೆ ಹೋಗಿ ಬಂದು, ಹಳ್ಳಿ ರಸ್ತೆಯಲ್ಲೇ ಕಾಲ ಕಳೆಯುತ್ತಿದ್ದ.
ಓದು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಹೋಗುತ್ತಿದ್ದ ಬಾಲಕನನ್ನು ಗಮನಿಸಿದ ಆ ಗ್ರಾಮದ ಯುವಕ ಕೃಷ್ಣ ಮುದುಳಿ ಎಂಬಾತ ಬಾಲಕನಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಭಾಗದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕೆಲಸ ಮಾಡುವ ಏಕತಾ ಸಂಸ್ಥೆಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಮುದುಳಿ, ಸಂಸ್ಥೆಯ ಹಿರಿಯ ಕಾರ್ಯಕರ್ತರೊಂದಿಗೆ ಬಾಲಕನ ಕಥೆಯನ್ನು ಹಂಚಿಕೊಂಡಿದ್ದಾರೆ. ನಂತರ ಏಕತಾ ಸಂಸ್ಥೆಯ ಕಾರ್ಯಕರ್ತರು ದೊಮ್ಗೆ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಸಹಕರಿಸಿದರು.
ಮಾನವ ಜೀವನದಲ್ಲಿ ಶಿಕ್ಷಣದ ಮೌಲ್ಯ ಹಾಗೂ ಉನ್ನತ ಶಿಕ್ಷಣದ ಅಗತ್ಯವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊಮ್ನ ಅಜ್ಜಿಗೆ ಮನವರಿಕೆ ಮಾಡಿದ ನಂತರ, ದೊಮ್ನನ್ನು ಶಾಲೆಗೆ ಕಳುಹಿಸಲು ಅಜ್ಜಿ ಒಪ್ಪಿದರು. ಆದರೆ ಗ್ರಾಮದಿಂದ 20 ರಿಂದ 40 ಕಿ.ಮೀ ದೂರದಲ್ಲಿರುವ ರಂಸ್ಪುರ, ಖಾದ್ರಗಡ ಮತ್ತು ಗುಮುಡಾದ ವಸತಿ ಶಾಲೆಗಳಿಗೆ ಹೋಗಲು ಗ್ರಾಮದಿಂದ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಅಷ್ಟು ದೂರದ ಶಾಲೆಗೆ ಮೊಮ್ಮಗನನ್ನು ಕಳುಹಿಸುವುದು ಅಜ್ಜಿಗೆ ಕಷ್ಟವಾಗಿತ್ತು. ಹಾಗಾಗಿ ದೊಮ್ಗೆ ಮಾಲಿಗುಡದಿಂದ 10 ಕಿ.ಮೀ ದೂರದಲ್ಲಿರುವ ದಸ್ಮಂತಪುರ ಬ್ಲಾಕ್ನ ನಂದಿಗಾಂವ್ನ ನಂದಿಗೋನ್ ಪ್ರೌಢಶಾಲೆಯಲ್ಲಿ 6ನೇ ತರಗತಿ ಓದುವುದು ಒಂದೇ ಮಾರ್ಗವಾಗಿತ್ತು.