ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಡಿಸೆಂಬರ್ 26 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದು, ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿಯುತ್ತಿದೆ. ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಆರ್ಥಿಕ ತಜ್ಞನ ಜೀವನ ಸಾಧನೆಯತ್ತ ಒಮ್ಮೆ ಮೆಲುಕು ಹಾಕೋಣ.
'ಸಿಂಗ್'ರ ರಾಜಕೀಯ ಚರಿತ್ರೆ : ಡಾ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದರು ಮತ್ತು ಸುಮಾರು 33 ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿದ್ದರು. ಅವರು 1991 ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾದರು ಮತ್ತು 1991 ರಿಂದ 1996 ರವರೆಗೆ ಅಂದಿನ ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಅವರು ಮೊದಲ ಬಾರಿಗೆ ದಕ್ಷಿಣ ದೆಹಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು, ಆದರೆ, ಸಂಸತ್ತನ್ನು ತಲುಪಲು ಸಾಧ್ಯವಾಗಲಿಲ್ಲ. ಹೌದು, ಡಾ. ಮನಮೋಹನ್ ಸಿಂಗ್ ಅವರು ದೇಶದ ರಾಜಧಾನಿ ದೆಹಲಿಯಿಂದ ತಮ್ಮ ರಾಜಕೀಯ ಜೀವನದ ಮೊದಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಚುನಾವಣೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಬಿಜೆಪಿ ಅಭ್ಯರ್ಥಿ ಪ್ರೊಫೆಸರ್ ವಿಜಯ್ ಕುಮಾರ್ ಮಲ್ಹೋತ್ರಾ ವಿರುದ್ಧ ಅವರು ಸೋಲನ್ನು ಎದುರಿಸಬೇಕಾಯಿತು.
1999 ರಲ್ಲಿ ಮೊದಲ ಲೋಕಸಭಾ ಚುನಾವಣೆ: 1999ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೂಡ ದಕ್ಷಿಣ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಅಂದಿನ ಬಿಜೆಪಿ ನಾಯಕ ಪ್ರೊಫೆಸರ್ ವಿಜಯ್ ಕುಮಾರ್ ಮಲ್ಹೋತ್ರಾ ಅವರನ್ನು 30 ಸಾವಿರ ಮತಗಳಿಂದ ಸಿಂಗ್ ಅವರನ್ನು ಸೋಲಿಸಿದ್ದರು. ಡಾ. ಮನಮೋಹನ್ ಸಿಂಗ್ ಅವರು 1991 ರಿಂದ ಸತತ ಐದು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಆರನೇ ಬಾರಿಗೆ 3 ವರ್ಷಗಳ ಕಾಲ ರಾಜ್ಯಸಭಾ ಸಂಸದರಾದರು. ಒಟ್ಟಾರೆ, ರಾಜ್ಯಸಭೆಯಲ್ಲಿ ಅವರ ಅಧಿಕಾರಾವಧಿ 33 ವರ್ಷಗಳು.
2024ರಲ್ಲಿ ರಾಜ್ಯಸಭೆಯಿಂದ ನಿವೃತ್ತಿ: ಈ ವರ್ಷದ ಏಪ್ರಿಲ್‌ನಲ್ಲಿ ರಾಜ್ಯಸಭೆಯಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅವರು ನಿವೃತ್ತರಾಗಿದ್ದರು . ವಯೋ ಸಹಜ ಹಾಗೂ ಹೃದಯದ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು, ಒಂದು ವರ್ಷದಿಂದ ಗಾಲಿಕುರ್ಚಿಯ ಸಹಾಯದಿಂದ ನಡೆದಾಡುತ್ತಿದ್ದರು. 2014 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ತಮ್ಮ ಕುಟುಂಬದೊಂದಿಗೆ ದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಸರ್ಕಾರಿ ನಿವಾಸದಲ್ಲಿ ವಾಸವಾಗಿದ್ದರು.
ಮಾಜಿ ಪ್ರಧಾನಿಗೆ ಏಳು ಬಾರಿ ಬೈಪಾಸ್ ಸರ್ಜರಿ: ಡಾ. ಮನಮೋಹನ್ ಸಿಂಗ್ ಅವರು ಹೃದ್ರೋಗದಿಂದ ಬಳಲುತ್ತಿದ್ದರು. ಇದರಿಂದ ಅವರು ಏಳು ಬಾರಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೊದಲಿನಿಂದಲೂ ಅವರು ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 2 ವರ್ಷಗಳ ಹಿಂದೆ ಅವರ ಆರೋಗ್ಯ ಹದಗೆಟ್ಟಾಗ ಅವರನ್ನು ದೆಹಲಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಸುಮಾರು 15 ದಿನಗಳ ನಂತರ ಅವರನ್ನು ಏಮ್ಸ್‌ನಿಂದ ಬಿಡುಗಡೆ ಮಾಡಲಾಗಿತ್ತು.
ದೆಹಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ: ಡಾ. ಮನಮೋಹನ್ ಸಿಂಗ್ ಅವರು 1969 ರಿಂದ 1971 ರವರೆಗೆ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದರು. ವಿಶ್ವವಿದ್ಯಾನಿಲಯದಲ್ಲೇ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಪ್ರಸಿದ್ಧರಾಗಿದ್ದರು. 1987ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನೂ ಪಡೆದಿದ್ದರು.
ಇದನ್ನೂ ಓದಿ: ದೇಶದ ಆರ್ಥಿಕ ಚರಿತ್ರೆಯನ್ನೇ ಬದಲಿಸಿದ ಸಿಂಗ್: ಭಾರತದ ದೂರದೃಷ್ಟಿಯ ಮಹಾನ್ ನಾಯಕ ’ಮನಮೋಹನ’