ನವದೆಹಲಿ: ಡಾ. ಮನಮೋಹನ್ ಸಿಂಗ್, ಸೆಪ್ಟೆಂಬರ್ 26, 1932 ಈಗಿನ ಪಾಕಿಸ್ತಾನದಲ್ಲಿರುವ ಪಶ್ಚಿಮ ಪಂಜಾಬ್‌ನ ಗಾಹ್‌ನಲ್ಲಿ ಜನಿಸಿದರು . ಒಂದು ಸಣ್ಣ ಹಳ್ಳಿಯಿಂದ ಬಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿ ಹಾಗೂ ಪ್ರಧಾನಿಯಾಗಿ ಅಳಿಸಲಾಗದ ಛಾಪು ಮೂಡಿಸಿದವರು ಡಾ ಮನಮೋಹನ್ ಸಿಂಗ್. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ನೇತೃತ್ವ ವಹಿಸಿ, ಭಾರತ ವಿಶ್ವದೆದುರು ಬಲಾಢ್ಯ ಆರ್ಥಿಕ ಶಕ್ತಿಯಾಗಿ ನಿಲ್ಲಲು ಕಾರಣರಾದವರು.
ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಸಿಖ್ ವ್ಯಕ್ತಿಯಾಗಿ ಡಾ. ಸಿಂಗ್ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಾಯಕತ್ವವು ಗಮನಾರ್ಹವಾದ ಆರ್ಥಿಕ ಪರಿವರ್ತನೆ ಮಾಡಿದ್ದಲ್ಲದೇ , ಕಷ್ಟ ಕಾಲದಲ್ಲಿ ಭಾರತವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಶೈಕ್ಷಣಿಕ ಪಯಣ: 1950 ರ ದಶಕದ ಆರಂಭದಲ್ಲಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು.ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನ ಮುಂದುವರೆಸಿದರು, 1957 ರಲ್ಲಿ ಅರ್ಥಶಾಸ್ತ್ರದಲ್ಲಿ 'ಫಸ್ಟ್ ಕ್ಲಾಸ್ ಆನರ್ಸ್' ಪದವಿ ಪಡೆದುಕೊಂಡರು.
ಅಲ್ಲಿಗೆ ಅಭ್ಯಾಸ ನಿಲ್ಲಿಸದ ಅವರು 1962 ರಲ್ಲಿ ಆಕ್ಸ್‌ಫರ್ಡ್‌ನ ನಫೀಲ್ಡ್ ಕಾಲೇಜಿನಲ್ಲಿ. ಡಾ. ಸಿಂಗ್ ಅವರು ಡಿ.ಫಿಲ್ ಮುಗಿಸಿದರು. ಪಂಜಾಬ್ ವಿಶ್ವವಿದ್ಯಾಲಯದಿಂದ ಆರಂಭಿಕ ವೃತ್ತಿ ಜೀವನ ಆರಂಭಿಸಿದರು. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಯುಎನ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್‌ನಲ್ಲಿ (UNCTAD) ಅಧ್ಯಾಪಕರಾಗಿ ಅನುಭವ ಪಡೆದುಕೊಂಡರು.
ರಾಜಕಾರಣದ ಪಯಣ ಪ್ರಾರಂಭ: 1971 ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡರು. ಇಲ್ಲಿಂದಲೇ ಡಾ ಸಿಂಗ್ ಅವರ ರಾಜಕೀಯ ಪ್ರಯಾಣ ಪ್ರಾರಂಭವಾಯಿತು. ನಂತರ ಅವರು ಮುಖ್ಯ ಆರ್ಥಿಕ ಸಲಹೆಗಾರ (CEA) ಮತ್ತು ಹಣಕಾಸು ಸಚಿವಾಲಯದ ಕಾರ್ಯದರ್ಶಿಯಂತಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು.
ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್: 1991 ರಿಂದ 1996 ರವರೆಗೆ ಅವರು ಹಣಕಾಸು ಸಚಿವರಾಗಿದ್ದರು. ಈ ಅವಧಿಯಲ್ಲಿ ಭಾರತದ ಆರ್ಥಿಕತೆಗೆ ಅವರು ನಿರ್ಣಾಯಕ ತಿರುವು ನೀಡಿದರು.
ಮನಮೋಹನ್ ಸಿಂಗ್ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಈ ಸಂದರ್ಭದಲ್ಲಿ ಸಿಂಗ್ ಅವರ ದಿಟ್ಟ ಆರ್ಥಿಕ ಸುಧಾರಣೆಗಳು ದೇಶದ ಆರ್ಥಿಕ ಮಾರ್ಗವನ್ನು ಪರಿವರ್ತಿಸಲು ಸಾಕಷ್ಟು ಕೆಲಸ ಮಾಡಿತು. ಅವರು ಆಗ ಕೈಗೊಂಡ ನಿರ್ಣಾಯಕ ಉದಾರೀಕರಣ ಕ್ರಮಗಳಿಂದ ದೇಶದ ಹಣಕಾಸು ಪರಿಸ್ಥಿತಿ ಸುಧಾರಣೆ ಕಂಡಿತು. ಈ ವೇಳೆ ಅವರು ರೂಪಾಯಿ ಅಪಮೌಲ್ಯಗೊಳಿಸಿದರು, ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದರು. ದೇಶವನ್ನು ಸರಿಯಾದ ಹಳಿಗೆ ತರಲು, ವಿದೇಶಿ ಹೂಡಿಕೆಯನ್ನು ಆಕರ್ಷಿಸಿದರು. ಈ ಮೂಲಕ ಭಾರತದ ಆರ್ಥಿಕತೆಯನ್ನು ಸ್ಥಿರಗೊಳಿಸಿದರು ಮತ್ತು ಭವಿಷ್ಯದ ಬೆಳವಣಿಗೆಗೆ ವೇದಿಕೆಯನ್ನು ಸಿದ್ಧಪಡಿಸಿದರು.
ಯುಪಿಎ ಸರ್ಕಾದ ಮೊದಲ ಅವಧಿ: 2004ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಜಯಗಳಿಸಿದ ನಂತರ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದರು. ನಂತರ ಸಿಂಗ್ ಅವರ ನಾಯಕತ್ವದಲ್ಲಿ ಭಾರತವು ಗಮನಾರ್ಹ ಆರ್ಥಿಕ ಬೆಳವಣಿಗೆ ಕಂಡಿತು.
ಸಿಂಗ್ ಆಡಳಿತ ಅವಧಿಯಲ್ಲಿ ಭಾರತದ ಆಡಳಿತವು ಅಂತರ್ಗತ ಬೆಳವಣಿಗೆ ಕಂಡಿತು. ಬಡತನ ನಿರ್ಮೂಲನೆ ಮತ್ತು ಶಿಕ್ಷಣ, ಆಹಾರ ಭದ್ರತೆ ಮತ್ತು ಉದ್ಯೋಗದಂತಹ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಯೋಜನೆಗಳು ಭಾರತವು ಸದೃಢವಾಗಿ ಬೆಳವಣಿಗೆ ಕಾಣಲು ನೆರವಾಯಿತು. ಅವರ ನೀತಿಗಳು ಆರ್ಥಿಕ ವಿಸ್ತರಣೆ ಹಾಗೂ ಸುಧಾರಣೆಗೆ ದಾರಿ ಮಾಡಿಕೊಟ್ಟವು. ಈ ಇಂತಹ ಕ್ರಮಗಳಿಂದಾಗಿ ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತರಾದರು.
ಮನಮೋಹನ್ ಸಿಂಗ್ ಅವರ ಎರಡನೇ ಅವಧಿ: 2009 ರಲ್ಲಿ ಡಾ. ಸಿಂಗ್ ಮತ್ತೊಮ್ಮೆ ಚುನಾಯಿತರಾದರು. ಆದಾಗ್ಯೂ, ಅವರ ಎರಡನೇ ಅವಧಿಯು ಪ್ರಕ್ಷುಬ್ಧತೆಯಿಂದ ತುಂಬಿತ್ತು ಎಂಬುದು ಗಮನಾರ್ಹ. ಏಕೆಂದರೆ ಹಣದುಬ್ಬರ, ಭ್ರಷ್ಟಾಚಾರ ಮತ್ತು ಆಡಳಿತದ ಅಸಮರ್ಥತೆಗಳ ಸುತ್ತಲಿನ ಟೀಕೆಗಳಿಂದಾಗಿ ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಈ ವಿವಾದಗಳ ಹೊರತಾಗಿಯೂ, ಅವರ ಸರ್ಕಾರವು ಆರ್ಥಿಕ ಮತ್ತು ಸಾಮಾಜಿಕ ನೀತಿಯಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿತ್ತು ಎಂದು ಆರ್ಥಿಕ ತಜ್ಞರು, ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಡಾ ಸಿಂಗ್ ಅವಧಿಯಲ್ಲಿ ಮಹತ್ವದ ಸುಧಾರಣೆಗಳು: ಡಾ. ಮನಮೋಹನ್ ಸಿಂಗ್ ಅವರ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವಾರು ಮಹತ್ವದ ಸುಧಾರಣೆಗಳು ಮತ್ತು ಉಪಕ್ರಮಗಳಿಂದ ದೇಶದ ಆರ್ಥಿಕತೆ ಅಭಿವೃದ್ಧಿ ಕಂಡಿದೆ.
ಸಿಂಗ್ ಸರ್ಕಾರವು ನಾಗರಿಕರಿಗೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿ ಹಕ್ಕುಗಳನ್ನು ಖಾತರಿಪಡಿಸುವ ಐತಿಹಾಸಿಕ ಶಾಸನಗಳನ್ನು ಅಂಗೀಕರಿಸುವ ಮೂಲಕ ಭವ್ಯ ಭಾರತಕ್ಕೆ ಭದ್ರ ಅಡಿಪಾಯ ಹಾಕಿತು. ಈ ಮೂಲಕ ಅವರ ನಾಯಕತ್ವವು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಆಟಗಾರನಾಗಿ ಭಾರತದ ಪಾತ್ರವನ್ನು ಗಟ್ಟಿಗೊಳಿಸಿತು, ಸುಧಾರಣೆಗಳೊಂದಿಗೆ ದೇಶವು ತ್ವರಿತ ಬೆಳವಣಿಗೆಯ ಹಂತವನ್ನು ತಲುಪಲು ರಾಜಮಾರ್ಗ ನಿರ್ಮಾಣ ಮಾಡಿದರು.
ಸಿಂಗ್ ಅವರು ಆರ್ಥಿಕ ನೀತಿ ನಿರೂಪಣೆಗಾಗಿ ನೀಡಿದ ಕೊಡುಗೆಗಳನ್ನು ಗುರುತಿಸಿ 1987 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿಲಾಗಿದೆ.