ಚೆನ್ನೈ, ತಮಿಳುನಾಡು: ಕೊಯಮತ್ತೂರಿನ ಕಾಲಪಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟನ್ನು ಕೊಟ್ಟುಕೊಂಡು ಪ್ರತಿಭಟನೆ ನಡೆಸಿದರು. ಹಸಿರು ಧೋತಿ ಧರಿಸಿ, ಟಾಪ್ ಶರ್ಟ್ ಧರಿಸದೇ ಮನೆಯಿಂದ ಹೊರಬಂದ ಅಣ್ಣಾಮಲೈ, ಹಗ್ಗದಿಂದ ಮಾಡಿದ ಚಾವಟಿಯಿಂದ ಚಾಟಿ ಬೀಸಿಕೊಂಡು ತಮ್ಮ ದೇಹವನ್ನೇ ದಂಡನೆಗೆ ಒಳಪಡಿಸಿಕೊಂಡರು.
ಆರು ಬಾರಿ ಚಾಟಿ ಬೀಸಿಕೊಂಡು ತಮ್ಮ ದೇಹವನ್ನು ದಂಡನೆಗೆ ಒಳಪಡಿಸಿಕೊಂಡರು. ಈ ಸಂದರ್ಭದಲ್ಲಿ ಏಳನೇ ಬಾರಿ ಚಾಟಿ ಬೀಸುತ್ತಿದ್ದಾಗ ಬಿಜೆಪಿ ಸದಸ್ಯರು ತಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್ ಸೋರಿಕೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ಈ ಚಾಟಿ ಬೀಸುವ ಪ್ರತಿಭಟನೆಯನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಅಣ್ಣಾಮಲೈ ಇದೇ ವೇಳೆ ಸ್ಪಷ್ಟಪಡಿಸಿದರು.
ಪ್ರತಿಭಟನೆ ಬಳಿಕ ಅಣ್ಣಾಮಲೈ ಹೇಳಿದ್ದಿಷ್ಟು: ನಾನು ನಿನ್ನೆ ನನ್ನ ಪಾದಗಳಿಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಹೇಳಿದ್ದೇನೆ ಅದರಂತೆ ಅವುಗಳನ್ನು ತೆಗೆದಿದ್ದೇನೆ ಎಂದು ಇದೇ ವೇಳೆ ಅಣ್ಣಾಮಲೈ ತಿಳಿಸಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷರು ಡಿಎಂಕೆಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ಶೂ ಧರಿಸುವುದಿಲ್ಲ ಎಂದು ಘೊಷಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಣ್ಣಾಮಲೈ ಇದೇ ವೇಳೆ ಪ್ರಕಟಿಸಿದರು.
ತಾಂತ್ರಿಕ ದೋಷದಿಂದ ಎಫ್‌ಐಆರ್ ಸೋರಿಕೆಯಾಗಿದೆ ಎಂದು ತಮಿಳುನಾಡು ಪೊಲೀಸರು ವಿವರಣೆ ನೀಡಿದ್ದಾರೆ ಎಂದು ಆರೋಪಿಸಿದ ಅಣ್ಣಾಮಲೈ, ಮಾಜಿ ಪೊಲೀಸ್ ಅಧಿಕಾರಿಯಾಗಿ ಎಫ್‌ಐಆರ್ ಈ ರೀತಿ ಸೋರಿಕೆಯಾಗುವ ಸಾಧ್ಯತೆಯಿಲ್ಲ ಎಂದು ನಂಬಿದ್ದೇನೆ ಎಂದು ಹೇಳಿದರು.
ಇದನ್ನು ಓದಿ: ಬಿಜೆಪಿ ಜೊತೆ ಕಾಂಗ್ರೆಸ್ ಒಳಒಪ್ಪಂದ, I.N.D.I.A ಕೂಟದ ಅಸ್ತಿತ್ವಕ್ಕೆ ಧಕ್ಕೆ: ಆಪ್ ಆರೋಪ
ಏನಿದು ಘಟನೆ ಹಿನ್ನೆಲೆ: ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಗಳು ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆ ಸಂಬಂಧ ಸಂತ್ರಸ್ತೆ ಡಿ.24 ರಂದು ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲೀಸರು ಪ್ರಕರಣವನ್ನು ನಿಭಾಯಿಸಿದ ರೀತಿ ವಿರುದ್ಧ ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ ತಮ್ಮ ಮನೆಯ ಮುಂದೆ ಛಾಟಿ ಏಟನ್ನು ಹೊಡೆಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದರು.
ಅಷ್ಟೇ ಅಲ್ಲ 48 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ಜತೆಗೆ ಹೆಣ್ಣು ಮಗಳಿಗಾದ ಅನ್ಯಾಯಕ್ಕೆ ಪ್ರಾಯಶ್ಚಿತ್ತವಾಗಿ ಆರು ಛಡಿ ಏಟು ಹೊಡೆದುಕೊಳ್ಳುತ್ತೇನೆ. ಡಿಎಂಕೆ ಸರ್ಕಾರ ಪತನವಾಗುವವರೆಗೂ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಓಡಾಡುತ್ತೇನೆ ಎಂದು ನಿನ್ನೆ ಅವರು ಶಪಥ ಮಾಡಿದ್ದರು.
ಇದನ್ನು ಓದಿ: ಕೆಲಸ ಮಾಡುತ್ತಿದ್ದಾಗ ತುಂಡಾಗಿ ಬಿದ್ದ ಬೃಹತ್ ಗಾತ್ರದ ಟವರ್: 70 ಅಡಿ ಮೇಲಿಂದ ಕೆಳಗೆ ಬಿದ್ದು ನಾಲ್ವರು ಕಾರ್ಮಿಕರು ಸಾವು