ನವದೆಹಲಿ:ಸಂವಿಧಾನದ ತತ್ವಗಳು ಮತ್ತು ಪ್ರತೀ ಚಿಂತನೆಯನ್ನು ರಕ್ಷಿಸಲು ಭಾರತದ ಜನರೆಲ್ಲರೂ ಒಗ್ಗೂಡಬೇಕು ಎಂದು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕರೆ ನೀಡಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನ ಅಂಗೀಕಾರವಾಗಿ ಇಂದಿಗೆ 75 ವರ್ಷವಾಗಿದೆ. ಐತಿಹಾಸಿಕ ಸಂದರ್ಭದಲ್ಲಿ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ನಮ್ಮ ಪೂರ್ವಜರ ಶ್ರಮ ಮತ್ತು ಎಚ್ಚರಿಕೆಯಿಂದ ರಚಿತವಾದ ಸಂವಿಧಾನ ಭಾರತದ ಜೀವಾಳ. ಇದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕನ್ನು ನಮಗೆ ಖಾತ್ರಿ ಮಾಡುತ್ತದೆ. ಭಾರತವನ್ನು ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪಿಸುತ್ತದೆ ಎಂದು ತಿಳಿಸಿದ್ದಾರೆ.
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕೇವಲ ಆದರ್ಶ ಅಥವಾ ವಿಚಾರಗಳಲ್ಲ. ಇದು 140 ಕೋಟಿ ಭಾರತೀಯರ ಜೀವನ ವಿಧಾನ. ಇಂದು ನಾವು ಸಂವಿಧಾನ ಸಭೆಗೆ ಕೊಡುಗೆ ನೀಡಿದ ಮಹಾನೀಯ ಸದಸ್ಯರನ್ನು ಸ್ಮರಿಸಬೇಕು. ಅವರ ದೂರದೃಷ್ಟಿ ಮತ್ತು ಬುದ್ಧಿವಂತಿಕೆಗೆ ನಾವು ಋಣಿಯಾಗಿರಬೇಕು ಎಂದಿದ್ದಾರೆ.