ಚೆನ್ನೈ (ತಮಿಳುನಾಡು):ಒಡಿಶಾದಲ್ಲಿರುವ ಜಗನ್ನಾಥ ದೇವಾಲಯದ ಖಜಾನೆಯ ನಾಪತ್ತೆಯಾಗಿರುವ ಕೀಗಳು ತಮಿಳುನಾಡಿಗೆ ಹೋಗಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತಗಳಿಗಾಗಿ ತಮಿಳರನ್ನು ದೂಷಿಸುವ ಪ್ರಯತ್ನ ಮತ್ತು ರಾಜ್ಯಗಳ ನಡುವೆ ಕ್ರೋಧದ ಭಾವನೆಯನ್ನು ಹುಟ್ಟಿಸುತ್ತಿದ್ದಾರೆ ಎಂದು ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ ನೀಡಿದ್ದಾರೆ.
ಒಡಿಶಾದಲ್ಲಿ ಸೋಮವಾರ ಚುನಾವಣಾ ಭಾಷಣ ಮಾಡುತ್ತಾ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, ಪುರಿಯಲ್ಲಿರುವ ಜಗನ್ನಾಥ ದೇವಾಲಯವೂ ಈ ಸರ್ಕಾರದ ಕೈಯಲ್ಲಿ ಸುರಕ್ಷಿತವಾಗಿಲ್ಲ. ರತ್ನಭಂಡಾರದ ಕೀಗಳ ಮೇಲಿನ ನ್ಯಾಯಾಂಗ ಆಯೋಗದ ವರದಿಯನ್ನು ಬಿಜೆಡಿ ಏಕೆ ಮುಚ್ಚಿಡಲಾಗುತ್ತಿದೆ ಎಂಬುದನ್ನು ಒಡಿಶಾ ಜನತೆ ತಿಳಿಯಲು ಬಯಸುತ್ತದೆ ಎಂದಿದ್ದರು. ಈ ಮೂಲಕ ಕಳೆದ ಆರು ವರ್ಷಗಳಿಂದ ದೇವಸ್ಥಾನದ ರತ್ನ ಭಂಡಾರದ (ಖಜಾನೆ) ಕೀಗಳು ಕಾಣೆಯಾಗಿರುವ ಬಗ್ಗೆ ಪ್ರಶ್ನೆ ಎತ್ತಿದ್ದರು.
ಮುಂದುವರೆದು, ಈ ವಿಷಯದಲ್ಲಿ ಬಿಜೆಡಿಯ ಪಾತ್ರ ಅನುಮಾನಕ್ಕೆ ಕಾರಣವಾಗಿದೆ. ರತ್ನ ಭಂಡಾರದ ಕೀ ತಮಿಳುನಾಡಿಗೆ ಹೋಗಿದೆ ಎಂದು ಹೇಳಲಾಗಿದೆ. ಬಿಜೆಪಿ ಸರ್ಕಾರ ಜೂನ್ 10ರಂದು ಅಧಿಕಾರಕ್ಕೆ ಬಂದ ನಂತರ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತದೆ ಎಂದು ಮೋದಿ ಹೇಳಿದ್ದರು. ಖಜಾನೆಯ ಕೀಗಳು ತಮಿಳುನಾಡಿಗೆ ಹೋಗಿವೆ ಎಂಬ ಮೋದಿ ಹೇಳಿಕೆ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಆಕ್ರೋಶ ಹೊರಹಾಕಿದ್ದಾರೆ.