ನವದೆಹಲಿ:ಜಿಲ್ಲಾ ನ್ಯಾಯಾಲಯವು 'ನ್ಯಾಯಾಂಗದ ಬೆನ್ನೆಲುಬು'. ಅದನ್ನು ನಾವು ಅಧೀನ ಕೋರ್ಟ್ ಎಂದು ಕರೆಯುವುದನ್ನು ನಿಲ್ಲಿಸಬೇಕು. ಮೊದಲು ಪ್ರಕರಣಗಳು ವಿಚಾರಣೆ ನಡೆಯುವುದೇ ಇಲ್ಲಿ. ಹೀಗಾಗಿ ಈ ನ್ಯಾಯಸ್ಥರದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.
ಇಲ್ಲಿ ನಡೆದ 'ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ'ದಲ್ಲಿ ಮಾತನಾಡಿದ ಸಿಜೆಐ, ಬೆನ್ನುಮೂಳೆಯು ನರಮಂಡಲದ ಕೇಂದ್ರ. ಅದರಂತೆ ನ್ಯಾಯ ವ್ಯವಸ್ಥೆಯ ಬೆನ್ನೆಲುಬು ಜಿಲ್ಲಾ ನ್ಯಾಯಾಲಯವಾಗಿದೆ. ನಾವು ಜಿಲ್ಲಾ ನ್ಯಾಯಾಂಗವನ್ನು ಅಧೀನ ನ್ಯಾಯಾಂಗ ಎಂದು ಕರೆಯುವುದನ್ನು ನಿಲ್ಲಿಸಬೇಕು. ಸ್ವಾತಂತ್ರ್ಯದ 75 ವರ್ಷಗಳ ನಂತರ, ನಾವು ಬ್ರಿಟಿಷರ ಯುಗದ ಮತ್ತೊಂದು ಅವಶೇಷವನ್ನು ಸಮಾಧಿ ಮಾಡುವ ಸಮಯ ಬಂದಿದೆ. ಅಧೀನತೆಯು ವಸಾಹತುಶಾಹಿ ಮನಸ್ಥಿತಿ ಎಂದು ಅವರು ಹೇಳಿದರು.
ದಿನನಿತ್ಯದ ವಿಚಾರಣೆಯಲ್ಲಿ ತಂತ್ರಜ್ಞಾನವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವಲ್ಲಿ ಜಿಲ್ಲಾ ನ್ಯಾಯಾಂಗವು ಮುಂದಿದೆ. ದೇಶದ ಜಿಲ್ಲಾ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 2.3 ಕೋಟಿ ಪ್ರಕರಣಗಳನ್ನು ಆಲಿಸಿವೆ ಎಂದು ಅವರು ಮಾಹಿತಿ ನೀಡಿದರು.
ಜಡ್ಜ್ಗಳಿಗೆ ಜನರ ಕಷ್ಟ ಗೊತ್ತಿರಬೇಕು:ಜಡ್ಜ್ಗಳಿಗೆ ಸಮಾಜದಲ್ಲಿನ ನೋವುಗಳ ಅರಿವು ಇರಬೇಕು. ಯಾವುದೇ ಪ್ರಕರಣದಲ್ಲಿ ತೀರ್ಪು ನೀಡುವ ಮುನ್ನ ಪರಿಸ್ಥಿತಿಯ ಅರಿವು ಇರಬೇಕು. ನ್ಯಾಯಾಧೀಶರು ಹೊಸ ಕಾನೂನುಗಳನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ನ್ಯಾಯಾಧೀಶರ ಸ್ಥಾನ ಉನ್ನತವಾಗಿದೆ. ಹೀಗಾಗಿ ಅವರು ಅತ್ಯುತ್ತಮ ಕಾನೂನು ಪಾಂಡಿತ್ಯ ಹೊಂದಿರಬೇಕು. ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ತಿಳಿದಿರಬೇಕು. ಪ್ರತಿ ಪ್ರಕರಣದಲ್ಲಿ ನ್ಯಾಯ ಒದಗಿಸಲು ಇದು ನೆರವು ನೀಡಲಿದೆ ಎಂದರು.
ಹಿಗ್ಗುತ್ತಿರುವ ಮಹಿಳೆಯರ ಸಂಖ್ಯೆ:ನ್ಯಾಯಾಂಗದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದ ಸಿಜೆಐ ಚಂದ್ರಚೂಡ್, ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ನ್ಯಾಯಾಂಗಕ್ಕೆ ಸೇರುತ್ತಿದ್ದಾರೆ. 2023 ರಲ್ಲಿ ರಾಜಸ್ಥಾನದಲ್ಲಿ ಸಿವಿಲ್ ನ್ಯಾಯಾಧೀಶರ ಒಟ್ಟು ನೇಮಕಾತಿಯಲ್ಲಿ ಶೇಕಡಾ 58 ರಷ್ಟು ಮಹಿಳೆಯರಿದ್ದಾರೆ. 2023 ರಲ್ಲಿ ದೆಹಲಿಯಲ್ಲಿ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಲ್ಲಿ ಶೇಕಡಾ 66 ರಷ್ಟು ಮಹಿಳೆಯರು, ಉತ್ತರ ಪ್ರದೇಶದಲ್ಲಿ 2022 ರ ಬ್ಯಾಚ್‌ನಲ್ಲಿ ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ನೇಮಕಾತಿಗಳಲ್ಲಿ ಶೇಕಡಾ 54 ರಷ್ಟು, ಕೇರಳದಲ್ಲಿ ಒಟ್ಟು ನ್ಯಾಯಾಂಗ ಅಧಿಕಾರಿಗಳ ಸಂಖ್ಯೆಯಲ್ಲಿ ಶೇಕಡಾ 72 ರಷ್ಟು ಮಹಿಳೆಯರು ಇದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಅಂಗವಿಕಲರ ಸಬಲೀಕರಣಕ್ಕಾಗಿ ಜಾರಿಯಾದ ಯೋಜನೆಗಳು ಅನುಷ್ಠಾನಗೊಳ್ಳಬೇಕು: ಸಿಜೆಐ ಚಂದ್ರಚೂಡ್ - CJI Chandrachud advises