ಕೋಲ್ಕತ್ತಾ(ಪಶ್ಚಿಮ ಬಂಗಾಳ): ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಇಂದು ನಡೆಯಿತು. ಮತ್ತೊಂದೆಡೆ, ಜಾರ್‌ಗ್ರಾಮ್‌ನ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಪಶ್ಚಿಮ ಮೇದಿನಿಪುರ ಜಿಲ್ಲೆಯ ಗಾರ್ಬೆಟಾ ಬಳಿ ನಡೆದಿದೆ.
ಆರನೇ ಹಂತದ ಮತದಾನದ ಹಿನ್ನೆಲೆ ಗಾರ್ಬೆಟಾ ವಿಧಾನಸಭೆಯ ವ್ಯಾಪ್ತಿಯ ಮಾಗ್ಲಪೋಟಾಕ್ಕೆ ತೆರಳಿದ್ದ ಪ್ರಣತ್ ತುಡು ಅವರ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷ ಬೆಂಬಲಿತ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಪ್ರಣತ್ ತುಡು ಜತೆಗಿದ್ದ ಸಿಐಎಸ್‌ಎಫ್ ಯೋಧರು ಸೇರಿದಂತೆ ಹಲವು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯ ಕುರಿತು ಚುನಾವಣಾ ಆಯೋಗ ವರದಿ ಕೇಳಿದೆ. ಘಟನೆಯ ನಂತರ ಹೆಚ್ಚುವರಿ ಭದ್ರತಾ ಪಡೆಗಳು ಗಾರ್ಬೆಟಾಕ್ಕೆ ಧಾವಿಸಿವೆ.
ಈ ಬಗ್ಗೆ ಜಾರ್‌ಗ್ರಾಮ್‌ನ ಬಿಜೆಪಿ ಪ್ರಣತ್ ತುಡು ಮಾತನಾಡಿ, "ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗಾರ್ಬೆಟಾ ಪ್ರದೇಶದಲ್ಲಿ ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ. ಕೆಲವು ಮತಗಟ್ಟೆಗಳ ಒಳಗೆ ಬಿಜೆಪಿ ಏಜೆಂಟರಿಗೆ ಅವಕಾಶವಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗಾರ್ಬೆಟಾಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ, ರಸ್ತೆಗಳನ್ನು ನಿರ್ಬಂಧಿಸಿದ್ದ ಟಿಎಂಸಿ ಗೂಂಡಾಗಳು ಕಾರಿನ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ, ಜೊತೆಗಿದ್ದ ಇಬ್ಬರು ಸಿಐಎಸ್ಎಫ್ ಜವಾನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.