ಕೋಲ್ಕತ್ತಾ(ಪಶ್ಚಿಮ ಬಂಗಾಳ):ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಶುಕ್ರವಾರ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಿಗೆ ಮತದಾನ ನಡೆದಿದೆ. ಚುನಾವಣೆ ವೇಳೆ ಅನೇಕ ಹಿಂಸಾಚಾರದ ಘಟನೆಗಳು ಸಂಭವಿಸಿವೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆಗಳು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಇದರ ನಡುವೆಯೂ ಸಂಜೆ 5 ಗಂಟೆಯವರೆಗೆ ಶೇ.77 ರಷ್ಟು ಮತದಾನವಾಗಿದೆ.
ದೇಶದ ಅತಿಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಪಶ್ಚಿಮ ಬಂಗಾಳ ಕೂಡ ಒಂದಾಗಿದೆ. ರಾಜ್ಯದಲ್ಲಿ ಒಟ್ಟಾರೆ 42 ಕ್ಷೇತ್ರಗಳಿದ್ದು, ಶುಕ್ರವಾರ ಮೊದಲ ಹಂತದಲ್ಲಿ ಕೂಚ್ ಬೆಹಾರ್ (ಎಸ್‌ಸಿ), ಅಲಿಪುರ್ ದುವಾರ್ಸ್ (ಎಸ್ಟಿ) ಮತ್ತು ಜಲ್ಪೈಗುರಿ (ಎಸ್‌ಸಿ) ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಮೂರು ಮೀಸಲು ಕ್ಷೇತ್ರಗಳಲ್ಲಿ ಕಳೆದ 2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು.
ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಅಧಿಕಾರಿಗಳ ಪ್ರಕಾರ, ಸಂಜೆ 5 ಗಂಟೆಯವರೆಗೆ ಕೂಚ್ ಬೆಹಾರ್‌ನಲ್ಲಿ ಶೇ.77.38. ಅಲಿಪುರ್ ದುವಾರ್ಸ್ನಲ್ಲಿ ಶೇ.75.54 ಮತ್ತು ಜಲ್ಪೈಗುರಿಯಲ್ಲಿ ಶೇ.79.33ರಷ್ಟು ಮತದಾನವಾಗಿದೆ. ಮತಗಟ್ಟೆಗಳ ಹೊರಗೆ ಇನ್ನೂ ಉದ್ದನೆಯ ಸರತಿ ಸಾಲುಗಳಲ್ಲಿ ಜನ ನಿಂತಿದ್ದರಿಂದ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಟಿಎಂಸಿ-ಬಿಜೆಪಿ ಪರಸ್ಪರ ಹೊಡೆದಾಟ, ದೂರು-ಪ್ರತಿದೂರು!:ಮತದಾನದ ಪ್ರಕ್ರಿಯೆ ವೇಳೆ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ. ಈ ಸಂಬಂಧ ಟಿಎಂಸಿ ಮತ್ತು ಬಿಜೆಪಿ ಕ್ರಮವಾಗಿ ಸುಮಾರು 100 ಮತ್ತು 50 ದೂರುಗಳನ್ನೂ ದಾಖಲಿಸಿವೆ. ಮತದಾನದ ವೇಳೆ ಹಿಂಸಾಚಾರ, ಮತದಾರರಿಗೆ ಬೆದರಿಕೆ, ಮತಗಟ್ಟೆ ಏಜೆಂಟರ ಮೇಲಿನ ಹಲ್ಲೆಗಳ ಕುರಿತು ದೂರು-ಪ್ರತಿದೂರು ನೀಡಲಾಗಿದೆ.
ಈಗಾಗಲೇ ಹಿಂಸಾಚಾರಪೀಡಿತ ಕೂಚ್ ಬೆಹರ್‌ನಲ್ಲಿ ಹೆಚ್ಚಿನ ಹಿಂಸಾಚಾರ ನಡೆದಿದೆ. ನಾವು ದೂರುಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಪರಿಶೀಲಿಸುತ್ತಿದ್ದೇವೆ. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಮುಖ ಹಿಂಸಾಚಾರದ ಘಟನೆಗಳ ಬಗ್ಗೆ ನಮಗೆ ವರದಿಯಾಗಿಲ್ಲ. ಮತದಾನ ಶಾಂತಿಯುತವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.