ನವದೆಹಲಿ:ಪ್ಯಾರಿಸ್ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ 2024ದಲ್ಲಿ ಭಾರತ 29 ಪದಕ ಗಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥ್ಲೀಟ್ಗಳನ್ನು ಶ್ಲಾಘಿಸಿದ್ದು, ಕ್ರೀಡಾಕೂಟದಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪ್ಯಾರಾಲಿಂಪಿಕ್ಸ್ ಪಟುಗಳ ಅಚಲವಾದ ಸಮರ್ಪಣೆ ಮತ್ತು ಅದಮ್ಯ ಮನೋಭಾವವನ್ನು ಹೊಗಳಿದ್ದಾರೆ. ಈ ಪ್ಯಾರಾಲಿಂಪಿಕ್ಸ್ ವಿಶೇಷ ಮತ್ತು ಐತಿಹಾಸಿಕ ಎಂದು ಕೊಂಡಾಡಿದ್ದಾರೆ.
ನಮ್ಮ ಅಸಾಧಾರಣ ಪ್ಯಾರಾಲಿಂಪಿಕ್ಸ್ ಅಥ್ಲೀಟ್ಗಳು 29 ಪದಕ ಗೆದ್ದಿದ್ದಾರೆ. ಈ ಸಾಧನೆಗೆ ದೇಶ ಹೆಮ್ಮೆ ಪಡುತ್ತಿದೆ. ಇದು ಭಾರತ ಪ್ಯಾರಾಲಿಂಪಿಕ್ಸ್ ಪ್ರವೇಶಿಸಿದಾಗಿನಿಂದ ಅತ್ಯುತ್ತಮ ಪ್ರದರ್ಶನ. ಈ ಸಾಧನೆಗೆ ನಮ್ಮ ಅಥ್ಲೀಟ್‌ಗಳ ಸಮರ್ಪಣಾ ಭಾವ ಮತ್ತು ಪರಿಶ್ರಮ ಕಾರಣ. ಅವರ ಕ್ರೀಡಾ ಮನೋಭಾವ ನಮಗೆ ಮತ್ತು ಭವಿಷ್ಯದ ಅಥ್ಲೀಟ್ಗಳಿಗೆ ಸ್ಪೂರ್ತಿ. ಇದು ನಮಗೆಲ್ಲ ಮರೆಯಲಾಗದ ಕ್ಷಣ ಎಂದು ತಿಳಿಸಿದ್ದಾರೆ.