ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ತನ್ನ ತಾಯಿ ಸೋನಿಯಾ ಅಪಾರ ಗೌರವ ಹೊಂದಿದ್ದಾರೆ ಹಾಗೂ ಅವರ ಹೇಳಿಕೆಯನ್ನು ಮಾಧ್ಯಮಗಳು ತಿರುಚಿರುವುದು ತುಂಬಾ ದುರದೃಷ್ಟಕರ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕೆಂಬ ಬಿಜೆಪಿಯ ಬೇಡಿಕೆಯನ್ನು ತಳ್ಳಿ ಹಾಕಿದ ಅವರು, ದೇಶ ಹಾಳು ಮಾಡಿದ್ದಕ್ಕಾಗಿ ಬಿಜೆಪಿಯೇ ಮೊದಲು ಕ್ಷಮೆಯಾಚಿಸಲಿ ಎಂದಿದ್ದಾರೆ.
"ನನ್ನ ತಾಯಿಗೆ ಈಗ 78 ವರ್ಷ ವಯಸ್ಸಾಗಿದೆ. 'ಇಷ್ಟು ದೀರ್ಘವಾದ ಭಾಷಣವನ್ನು ಓದಿ ಅಧ್ಯಕ್ಷರಿಗೆ ಸುಸ್ತಾಗಿರಬೇಕು, ಪಾಪ' ಎಂದಷ್ಟೇ ಅವರು ಹೇಳಿದ್ದು. ಅವರಿಗೆ ರಾಷ್ಟ್ರಪತಿಯವರ ಬಗ್ಗೆ ಸಂಪೂರ್ಣ ಗೌರವವಿದೆ. ಇಂಥ ವಿಷಯವನ್ನು ಮಾಧ್ಯಮಗಳು ತಿರುಚುತ್ತಿರುವುದು ತುಂಬಾ ದುರದೃಷ್ಟಕರ" ಎಂದು ಪ್ರಿಯಾಂಕಾ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
"ಅವರಿಬ್ಬರೂ ಗೌರವಾನ್ವಿತ ವ್ಯಕ್ತಿಗಳಾಗಿದ್ದು, ಅವರು ನಮಗಿಂತ ಹಿರಿಯರು. ಹಿರಿಯರಾದ ಸೋನಿಯಾರವರ ಮಾತು ಯಾವುದೇ ಅಗೌರವವನ್ನು ಅರ್ಥೈಸುವುದಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ" ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಸಮಿತಿಯ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಸಂಸತ್ ಭವನದ ಸಂಕೀರ್ಣದಿಂದ ನಿರ್ಗಮಿಸುವಾಗ ಹೇಳಿದರು.
ಇದಕ್ಕೂ ಮುನ್ನ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಕೂಡ ಈ ವಿಷಯದ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.